ನವದೆಹಲಿ: ಆಡಳಿತದಲ್ಲಿ ಮತ್ತಷ್ಟು ದಕ್ಷತೆ ತರುವ ಉದ್ದೇಶದಿಂದ ನಿನ್ನೆ ಕೇಂದ್ರ ಸರ್ಕಾರ ಮರು ರಚನೆ ಮಾಡಿದ 8 ಪ್ರಧಾನ ಸಂಸದೀಯ ಸಮಿತಿಗಳಲ್ಲಿಯೂ ಅಮಿತ್ ಶಾ ಸ್ಥಾನ ಗಳಿಸಿದ್ದಾರೆ. ಸಂಸದೀಯ ವ್ಯವಹಾರ ಸಮಿತಿ ಹಾಗೂ ವಸತಿ ಸಮಿತಿಯ ಹೊರತಾಗಿ ಉಳಿದ 6 ಸಮಿತಿಗಳಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಯಾಗಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಸತಿ, ಹಣಕಾಸು ವ್ಯವಹಾರ, ಸಂಸದೀಯ ವ್ಯವಹಾರ, ರಾಜಕೀಯ ವ್ಯವಹಾರ, ಭದ್ರತೆ, ಹೂಡಿಕೆ ಮತ್ತು ಬೆಳವಣಿಗೆ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ 6 ಸಮಿತಿಗಳಲ್ಲಿ ಇದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಭದ್ರತೆ ಹಾಗೂ ಹಣಕಾಸು ವ್ಯವಹಾರ ಸಮಿತಿಗಳಲ್ಲಿ ಸ್ಥಾನ ನೀಡಲಾಗಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಸತಿ, ಹಣಕಾಸು, ರಾಜಕೀಯ, ಹೂಡಿಕೆ ಮತ್ತು ಬೆಳವಣಿಗೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ರಿಗೆ ಹಣಕಾಸು, ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ ಸಮಿತಿಯಲ್ಲಿ ಅವಕಾಶ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಉದ್ಯೋಗ ಹಾಗೂ ಕೌಶಲ್ಯ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಿ ಮಾತ್ರ ಇದ್ದಾರೆ.