ನವದೆಹಲಿ:ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಇಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಿದ್ದವಾಗಿದೆ.
ಪ್ರಪಂಚದ ಯಾವುದೇ ದೇಶಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿಲ್ಲ. ಹೀಗಾಗಿ ಚಂದ್ರಯಾನ-2 ಲ್ಯಾಂಡಿಂಗ್ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕೌತುಕದಿಂದ ಕಾಯುತ್ತಿದೆ.
ಸೋಮವಾರ ಮಧ್ಯಾಹ್ನ ವಿಕ್ರಮ್ ಲ್ಯಾಂಡರ್, ಆರ್ಬಿಟ್ನಿಂದ ಯಶಸ್ವಿಯಾಗಿ ಬೇರ್ಪಟ್ಟು ಚಂದ್ರನತ್ತ ತನ್ನ ಪ್ರಯಾಣ ಬೆಳೆಸಿತ್ತು. ಈ ವಿಕ್ರಮ್ ರೋವರ್ 6 ಚಕ್ರಗಳನ್ನ ಹೊಂದಿರುವ ಪ್ರಗ್ಯಾನ್ ಎಂಬ ರೋವರ್ನಹೊತ್ತೊಯ್ದಿದ್ದು, ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ.
ಲ್ಯಾಂಡಿಂಗ್ ವೇಳೆ, ಲ್ಯಾಂಡಿಗ್ ನಂತರ ನಡೆಯೋದೇನು?
- ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ಚಿತ್ರಗಳನ್ನ ಸೆರೆಹಿಡಿಯುವುದು ಸೇರಿದಂತೆ ಹಲವು ಸಂಕೀರ್ಣವಾದ ಕೆಲಸಗಳನ್ನ ವಿಕ್ರಮ್ ಲ್ಯಾಂಡರ್ ನಿರ್ವಹಿಸಲಿದೆ.
- ನುಸುಕಿನಜಾವ 1.40ಕ್ಕೆ ಚಂದ್ರನ ಮೇಲ್ಮೈಗಿಂತ 35 ಕಿಲೋ ಮೀಟರ್ ಎತ್ತರದಲ್ಲಿರುವ ವಿಕ್ರಮ್, 6 ಸಾವಿರ ಕಿಲೋ ಮೀಟರ್ ವೇಗದಲ್ಲಿ ಚಂದ್ರನ ಹತ್ತಿರಕ್ಕೆ ಸಮೀಪಿಸಲಿದೆ. ಕೇವಲ 10 ನಿಮಿಷದಲ್ಲಿ ಚಂದ್ರನ ಮೇಲ್ಮೈಗಿಂತ 7.4 ಕಿ.ಮೀ. ಎತ್ತರಕ್ಕೆ ಬಂದು ತಲುಪಲಿದ್ದು, ಅದರ ವೇಗವನ್ನ 526 ಕಿಲೋ ಮೀಟರ್ಗೆ ತಗ್ಗಿಸಿಕೊಳ್ಳಲಿದೆ.
- ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ 400 ಮೀಟರ್ ಎತ್ತರಕ್ಕೆ ತಲುಪುತಿದ್ದಂತೆ ಸುಮಾರು 12 ಸೆಕೆಂಡ್ಗಳ ಕಾಲ ಚಂದ್ರನ ಮೇಲ್ಮೈ ಕುರಿತು ಕೆಲವು ಡಾಟಾ ಸಂಗ್ರಹಿಸಲಿದೆ.
- ಮುಂದಿನ 66 ಸೆಕೆಂಡ್ಗಳ ಕಾಲ 400 ಮೀಟರ್ ಎತ್ತರದಿಂದ 100 ಮೀಟರ್ಗೆ ತಲುಪಲಿದೆ.
- 100 ಮೀಟರ್ ಎತ್ತರಕ್ಕೆ ತಲುಪುತ್ತಿದ್ದಂತೆ 25 ಸೆಕೆಂಡ್ಗಳ ಕಾಲ ಈಗಾಗಲೇ ಲ್ಯಾಂಡಿಂಗ್ಗಾಗಿ ಗುರುತಿಸಿರುವ 2 ಸ್ಥಳಗಳ ಪೈಕಿ ಎಲ್ಲಿ ಲ್ಯಾಂಡ್ ಮಾಡಬೇಕು ಎಂಬ ನಿರ್ಧಾರವನ್ನ ವಿಕ್ರಮ್ ಕೈಗೊಳ್ಳಲಿದೆ. ಚಂದ್ರಯಾನ-2 ಲ್ಯಾಂಡರ್ನಲ್ಲಿನ ಆನ್ಬೋರ್ಡ್ ಉಪಕರಣಗಳು ಈ ನಿರ್ಧಾರ ಕೈಗೊಳ್ಳಲು ವಿಕ್ರಮ್ಗೆ ಅಗತ್ಯವಾದ ಡಾಟಾ ನೀಡಲಿವೆ.
- ಮೊದಲೇ ಗುರ್ತಿಸಿದ 2 ಸ್ಥಳಗಳ ಪೈಕಿ ಮೊದಲ ಸ್ಥಳವನ್ನ ವಿಕ್ರಮ್ ಆಯ್ಕೆ ಮಾಡಿಕೊಂಡರೆ. 65 ಸೆಕೆಂಡ್ಗಳಲ್ಲಿ ತನ್ನ ವೇಗವನ್ನ ತಗ್ಗಿಸಿಕೊಳ್ಳುತ್ತ ಚಂದ್ರನ ಮೇಲ್ಮೈನಿಂದ 10 ಮೀಟರ್ ಎತ್ತರ ತಲುಪಲಿದೆ.
- ಒಂದು ವೇಳೆ 2ನೇ ಸ್ಥಳವನ್ನ ವಿಕ್ರಮ್ ಆಯ್ಕೆ ಮಾಡಿಕೊಂಡರೆ 40 ಸೆಕೆಂಡ್ಗಳಲ್ಲಿ ಚಂದ್ರನ ಮೇಲ್ಮೈನಿಂದ 60 ಮೀಟರ್ ಎತ್ತರ ತಲುಪಲಿದೆ. ಮುಂದಿನ 25 ಸೆಕೆಂಡ್ಗಳಲ್ಲಿ 60 ರಿಂದ 10 ಮೀಟರ್ ತಲುಪಲಿದೆ.
- 10 ಮೀಟರ್ ಎತ್ತರಕ್ಕೆ ಬಂದು ತಲುಪುತಿದ್ದಂತೆ ಮುಂದಿನ 13 ಸೆಕೆಂಡ್ಗಳಲ್ಲಿ ವಿಕ್ರಮ್ ಲ್ಯಾಂಡರ್, ಚಂದಿರನ ಅಂಗಳಕ್ಕೆ ಇಳಿಯಲಿದೆ.
- ಯಶಸ್ವಿಯಾಗಿ ಚಂದಿರನ ಅಂಗಳ ತಲುಪಿದ 15 ನಿಮಿಷಗಳ ನಂತರ ಮೊದಲ ಛಾಯಾಚಿತ್ರವನ್ನ ಕಳುಹಿಸಿಕೊಡಲಿದೆ.
- ಇನ್ನು ಲ್ಯಾಂಡ್ ಆದ 4 ಗಂಟೆಗಳ ನಂತರ 6 ಚಕ್ರಗಳ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ನಿಂದ ಬೇರ್ಪಡಲಿದೆ.
ದಕ್ಷಿಣ ಧ್ರುವದಲ್ಲೇ ಲ್ಯಾಂಡಿಗ್ ಏಕೆ?
ಚಂದ್ರನ ದಕ್ಷಿಣ ಧ್ರುವ ಉತ್ತರ ಧ್ರುವಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚು ನೆರಳಿನಿಂದ ಆವೃತವಾಗಿದೆ. ನೆರಳಿನ ಪ್ರದೇಶದಲ್ಲಿ ನೀರಿನ ಅಂಶ ಕೊಂಚ ಹೆಚ್ಚಾಗಿರುವ ಸಾಧ್ಯತೆಯಿಂದ ಇಸ್ರೋ ದಕ್ಷಿಣ ಧ್ರುವವನ್ನು ಆರಿಸಿಕೊಂಡು ಆ ಭಾಗದಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಒಂದು ವೇಳೆ ಈ ಸವಾಲಿನಲ್ಲಿ ಇಸ್ರೋ ಗೆದ್ದಲ್ಲಿ ಈ ಸಾಧನೆ ಗೈದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಭಾರತದ್ದಾಗಲಿದೆ.