ಲಖನೌ(ಉತ್ತರ ಪ್ರದೇಶ): ಪ್ರತಿಪಕ್ಷಗಳ ಸ್ಥೈರ್ಯವನ್ನು ತಗ್ಗಿಸಲು ಬಿಜೆಪಿ ಹಣದ ಶಕ್ತಿಯನ್ನು ಬಳಸುತ್ತಿದ್ದು, ಬಿಹಾರದಲ್ಲಿ ವರ್ಚುವಲ್ ರ‍್ಯಾಲಿಗಳನ್ನು ನಡೆಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
'ಜಾರ್ಖಂಡ್ನಲ್ಲಿ ಸೋತ ನಂತರ ಬಿಹಾರದಲ್ಲೂ ಜನರು ನಮ್ಮ ವಿರುದ್ಧವಾಗಿದ್ದಾರೆ ಎಂದು ಬಿಜೆಪಿ ಅರ್ಥ ಮಾಡಿಕೊಳ್ಳುತ್ತಿದೆ' ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ತನ್ನ ಸೋಲಿನ ಅರಿವಾಗಿ ಪ್ರತಿಪಕ್ಷಗಳ ಸ್ಥೈರ್ಯವನ್ನು ಕಡಿಮೆ ಮಾಡಲು ಹಣ ಬಲ ಪ್ರದರ್ಶನಕ್ಕೆ 150 ಕೋಟಿ ರೂಪಾಯಿ ವೆಚ್ಚದಲ್ಲಿ ವರ್ಚುವಲ್ ರ‍್ಯಾಲಿ ಮಾಡಿದೆ ಎಂದಿದ್ದಾರೆ. ಬಿಹಾರದಲ್ಲಿ ಬಿಜೆಪಿಯ ಮೈತ್ರಿ ಪರಸ್ಪರ ಅಪನಂಬಿಕೆ ಮತ್ತು ಗುಂಪುಗಾರಿಕೆಯಿಂದ ಮೂರು ಭಾಗವಾಗಿ ಹೋಗಿದೆ ಎಂದಿದ್ದಾರೆ.
ಭಾನುವಾರ ನಡೆದ ವರ್ಚುವಲ್ ರ‍್ಯಾಲಿಯ ಮೂಲಕ ಬಿಜೆಪಿ ಕಾರ್ಯಕರ್ತರು ಮತ್ತು ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಆಳ್ವಿಕೆಯಲ್ಲಿ ರಾಜ್ಯವು 'ಜಂಗಲ್ ರಾಜ್ಯದಿಂದ ಜನತಾ ರಾಜ್ಯ'ವಾಗಿ ಮಾರ್ಪಾಡಾಗಿದೆ. ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.