ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತಿಸ್ಪರ್ಧಿ ಪಕ್ಷಗಳ ಮೇಲೆ ಬಿಜೆಪಿ ವಾಗ್ದಾಳಿ ನಡೆಸಿದ್ದು, 370ನೇ ವಿಧಿ ಪುನಃ ಸ್ಥಾಪಿಸುವ ಬೇಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರ ನಿಲುವು ಪಾಕಿಸ್ತಾನದ ನಿಲುವಿನಂತಿವೆ ಎಂದು ಗಂಭೀರ ಆರೋಪ ಮಾಡಿದೆ.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದೊಂದಿಗಿನ ಒಪ್ಪಂದದ ಬಗ್ಗೆ ಕಾಂಗ್ರೆಸ್ ಗುರಿಯಾಗಿಸಿಕೊಂಡು ಬಿಜೆಪಿ ವಾಗ್ದಾಳಿ ನಡೆಸಿತು. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾತನಾಡಿ, ನಾಯಕ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಅನಿಸಿಕೆ, ಆರ್‌ಜೆಡಿ ನಾಯಕ ಶಿವಾನಂದ್ ತಿವಾರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ 'ಕಪಿಲ್ ಸಿಬಲ್ ಅವರ ಹೇಳಿಕೆ ಮೂಲಕ ಜರಿದರು.
ಬರಾಕ್ ಒಬಾಮಾ ಅವರು ನಾಲ್ಕೈದು ದಿನಗಳಲ್ಲಿ ಅವರನ್ನು (ರಾಹುಲ್) ಏನೆಂಬುದು ತಿಳಿದುಕೊಂಡರು. ಅವರೊಂದಿಗೆ ನಿತ್ಯವೂ ಸಂವಹನ ನಡೆಸುವವರು ಏನೆಂಬುದು ಅರಿತುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಪಾತ್ರ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಮುಖಂಡರು ತಮ್ಮ ಎದೆಯ ಮೇಲೆ 100 ಟನ್ ಕಲ್ಲಿನ ಭಾರ ಹೊತ್ತುಕೊಂಡು ಅವರನ್ನು ಹೊಗಳುತ್ತಿದ್ದರು. ಈಗ ಅವರೆಲ್ಲ ಉಸಿರುಗಟ್ಟುವಂತಹ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಬಿಜೆಪಿ ಬಹಳ ಹಿಂದಿನಿಂದಲೂ ಹೇಳುತ್ತಿತ್ತು. ಈಗ ಶಿವಾನಂದ್ ತಿವಾರಿ ಅವರಂತಹ ಕಾಂಗ್ರೆಸ್ ಸ್ನೇಹಿತರೊಬ್ಬರು ಕಾರ್ಯ ನಿರ್ವಹಿಸದ ಪಿಕ್ನಿಕ್ ಅಧ್ಯಕ್ಷ ಎಂದು ಕರೆದಿದ್ದಾರೆ ಎಂದು ಅಣಕವಾಡಿದರು.
'ಗುಪ್ಕರ್ ಒಕ್ಕೂಟ' ಎಂದು ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರ ಪಕ್ಷಗಳ ಸಂಘಟನೆಯನ್ನು ಬಿಜೆಪಿ ವಕ್ತಾರರು ಇದನ್ನು ಅಪವಿತ್ರ ಕೂಟವೆಂದು ಬಣ್ಣಿಸಿದರು. ಇದು ಭಾರತೀಯ ಸಂಸತ್ತು ಅಂಗೀಕರಿಸಿದ ಕಾನೂನುಗಳ ಅನುಷ್ಠಾನ ವಿರೋಧಿಸುವ ಗುರಿ ಹೊಂದಿದೆ. ಈ ಗುಪ್ಕರ್ ಒಕ್ಕೂಟವು ಪಾಕಿಸ್ತಾನ ಮತ್ತು ಭಾರತ ವಿರೋಧಿ ದೇಶಗಳಿಗೆ ಬೇಕಾದುದನ್ನು ಬಯಸುತ್ತದೆ. ಪಾಕಿಸ್ತಾನವು ಪ್ರತಿ ವೇದಿಕೆಗೆ ಹೋದಾಗಲೆಲ್ಲ 370ನೇ ವಿಧಿ ತೆಗೆದುಹಾಕುವುದರ ವಿರುದ್ಧ ಮಾತನಾಡಿದೆ. ಗುಪ್ಕರ್ ಅಲೈಯನ್ಸ್ ಇದನ್ನೇ ಹೇಳುತ್ತದೆ ಎಂದು ಪಾತ್ರ ಹೇಳಿದರು.