ಪಾಟ್ನಾ: ಲಾಕ್ ಡೌನ್ ನಡುವೆ ರಾಜಸ್ಥಾನದ ಕೋಟಾದಲ್ಲಿದ್ದ ತಮ್ಮ ಮಗಳನ್ನು ಕರೆತರಲು ಬಿಜೆಪಿ ಶಾಸಕನಿಗೆ ಪಾಸ್ ನೀಡಿರುವ ಕುರಿತು ಬಿಹಾರ ಸರ್ಕಾರ ತನಿಖೆಗೆ ಆದೇಶಿಸಿದೆ.
ಲಾಕ್ ಡೌನ್ ಹೆಸರಿನಲ್ಲಿ ಜನ ಸಾಮಾನ್ಯರನ್ನು ಹೊರಗಡೆ ಓಡಾಡಲು ಬಿಡದ ನಿತೀಶ್ ಕುಮಾರ್ ಸರ್ಕಾರ, ಬಿಜೆಪಿ ಶಾಸಕನಿಗೆ ಪಾಸ್ ನೀಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿ, ಮಾನದಂಡಗಳನ್ನು ಅನುಸರಿಸಿ ಪಾಸ್ ನೀಡಲಾಗಿದೆಯೇ ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಪಾಸ್ ನೀಡುವಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆಸಿದ್ದು ಕಂಡು ಬಂದಲ್ಲಿ ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನವಾಡ ಜಿಲ್ಲೆಯ ಹಿಸುವಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಸಿಂಗ್ ಅವರು ಏಪ್ರಿಲ್ 16ರಂದು ವಿಶೇಷ ಪಾಸ್ ಮೂಲಕ ರಾಜಸ್ಥಾನದ ಕೋಟಾಗೆ ವೈದ್ಯಕೀಯ ಕೋಚಿಂಗ್ ಗೆ ತೆರಳಿದ್ದ ತಮ್ಮ ಮಗಳನ್ನು ಕರೆ ತಂದಿದ್ದರು.