ಕರ್ನಾಟಕ

karnataka

ETV Bharat / bharat

ಅಜಾದ್ ರಾಜ್ಯಸಭೆ ಅವಧಿ ಫೆಬ್ರವರಿ 21ಕ್ಕೆ ‌ಮುಕ್ತಾಯ: ಅವರ ಭವಿಷ್ಯ ಕುರಿತ ಊಹಾಪೋಹಕ್ಕೆ ತೆರೆ - congress senior leaders

ಕಾಂಗ್ರೆಸ್​ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ 23 ಹಿರಿಯ ‌ಕಾಂಗ್ರೆಸ್ ಮುಖಂಡರ‌ ನಾಯಕತ್ವದ ವಿರುದ್ಧ ಪತ್ರ ಬರೆದ ಮರು ದಿನವೇ ಕಾಂಗ್ರೆಸ್ ಹಿರಿಯ ನಾಯಕ ಮತ್ತು ‌ರಾಜ್ಯಸಭೆ ಪ್ರತಿಪಕ್ಷ ‌ನಾಯಕ‌ ಗುಲಾಂ ನಬಿ ಅಜಾದ್ ಅವರ ಪಾತ್ರ, ಭವಿಷ್ಯದಲ್ಲಿ‌ ಏನು‌ ಎಂಬ ಕುರಿತು ಪಕ್ಷದ ವಲಯದಲ್ಲಿ‌ ಚರ್ಚೆ ನಡೆಯುತ್ತಿದೆ.

‌ರಾಜ್ಯಸಭೆ ಪ್ರತಿಪಕ್ಷ ‌ನಾಯಕ‌ ಗುಲಾಂ ನಭಿ ಅಜಾದ್
‌ರಾಜ್ಯಸಭೆ ಪ್ರತಿಪಕ್ಷ ‌ನಾಯಕ‌ ಗುಲಾಂ ನಭಿ ಅಜಾದ್

By

Published : Aug 31, 2020, 10:31 PM IST

ನವದೆಹಲಿ: ಅಜಾದ್ ಅವರ ರಾಜ್ಯಸಭೆಯಲ್ಲಿನ ಐದನೇ ಅವಧಿ ಫೆಬ್ರುವರಿ 15,2021ಕ್ಕೆ ಕೊನೆಗೊಳ್ಳಲಿದೆ. ರಾಜ್ಯಸಭೆಗೆ ಅವರ ಪುನರ್​ ಆಯ್ಕೆ ಯಾವುದೇ ಪಕ್ಷದ ನೀತಿ ನಿರ್ವಾಹಕರಿಗೆ ಕಷ್ಟ ಸಾಧ್ಯವೇ ಸರಿ.

ಪುದುಚೇರಿಯಿಂದ ರಾಜ್ಯಸಭೆಗೆ ‌ಅವರ ಆಯ್ಕೆ ಆಗಬಹುದು ಎನ್ನುವ ನೀರಿಕ್ಷೆ‌ ಇಟ್ಟುಕೊಳ್ಳಲಾಗಿತ್ತು. ಎಐಡಿಎಂಕೆ ನಾಯಕ ಎನ್.ಗೋಪಾಲಕೃಷ್ಣನ್ ಅವರ ಸ್ಥಾನ ರಾಜ್ಯಸಭೆಯಲ್ಲಿ ಅಕ್ಟೋಬರ್ 2021ರಲ್ಲಿ ಖಾಲಿ ಆಗಲಿದೆ. ಆದರೆ‌ ಈ ಸಾಧ್ಯತೆ ಕಾಂಗ್ರೆಸ್‌ ಪುನಃ ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದರ ಮೇಲೆ‌ ನಿಂತಿದೆ. ಅದರರ್ಥ ಅಜಾದ್ ಅವರು ರಾಜ್ಯಸಭೆಗೆ ಮಾರ್ಚ್ 2022 ರಲ್ಲಿ ನಡೆಯಲಿರುವ ದೈವಾರ್ಷಿಕ ಚುನಾವಣೆವರೆಗೂ ಕಾಯಬೇಕಾಗುತ್ತದೆ. ಅಲ್ಲದೇ ಸೂಕ್ತ ಖಾಲಿ ‌ಸ್ಥಾನ ಲಭ್ಯವಾದರೆ‌ ಮಾತ್ರ ಅವರು ರಾಜ್ಯಸಭೆಗೆ ಪುನರಾಯ್ಕೆ ಆಗುವ ಸಾಧ್ಯತೆ ಇದೆ. ಆದರೆ ಈ ಸಾಧ್ಯತೆ ತೀರ ಕಡಿಮೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಆಜಾದ್ ಅವರು ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶವೆಂದು 2019ರಲ್ಲಿ ಘೋಷಿಸಲಾಗಿದೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ಆಗುವವರೆಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸದ್ಯದ ಮಟ್ಟಿಗೆ ಚುನಾವಣೆ ಸಾಧ್ಯವಿಲ್ಲ. ಇಲ್ಲಿ ಕ್ಷೇತ್ರಗಳ ಪುನರ್ ​ವಿಂಗಡಣೆ ಕಾರ್ಯ ಮಾರ್ಚ್ 2021ರಲ್ಲಿ ಮುಗಿಯಲಿದೆ.

ಆಜಾದ್ ಅವರು 2015ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆಯೂ ಸಾಕಷ್ಟು ಕುತೂಹಲ ಇತ್ತು. ಆದರೆ ಈ ಚಾಣಾಕ್ಷ ರಾಜಕಾರಣಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ಬೆಂಬಲವನ್ನು ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈಗ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದೆ. ಹಾಗೆಯೇ ಕಾಂಗ್ರೆಸ್ ನಾಯಕರಿಗೆ ಅವರನ್ನು ರಾಜ್ಯಸಭೆಗೆ ಬೇರೆ ಯಾವುದೇ ರಾಜ್ಯದಿಂದ ಪುನರಾಯ್ಕೆ ಮಾಡುವುದು ತುಂಬಾ ಕಷ್ಟಸಾಧ್ಯ.

ಕಾಂಗ್ರೆಸ್ ಆಡಳಿತವಿರುವ ಪಂಜಾಬ್,‌ ರಾಜಸ್ಥಾನ ಮತ್ತು ಛತ್ತೀಸ್​​ಗಢ ರಾಜ್ಯಗಳಿಂದ ಈಗಾಗಲೇ ಕಾಂಗ್ರೆಸ್ ನಾಯಕರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಈ ರಾಜ್ಯಗಳಿಂದ ರಾಜ್ಯಸಭೆಯಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ. ಇನ್ನುಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿದೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆ ಇದೆ. ‌‌ಅಲ್ಲದೇ ಈ‌ ರಾಜ್ಯಗಳಿಂದ ರಾಜ್ಯಸಭೆಗೆ ಚುನಾವಣೆ ಈಗಾಗಲೇ‌ ಮುಗಿದಿದೆ.

ಅಜಾದ್ ಅವರಿಗೆ ಮಹಾರಾಷ್ಟ್ರದಿಂದಲೂ ಆಯ್ಕೆಯಾಗುವ ಸಾಧ್ಯತೆ ಇಲ್ಲ.‌ ಈ ರಾಜ್ಯದಲ್ಲಿ ಶಿವಸೇನಾ, ಎನ್​ಸಿಪಿ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೆ. ಇಲ್ಲಿಂದ ಈಗಾಗಲೇ ರಾಜ್ಯಸಭೆಗೆ ಚುನಾವಣೆ ಮುಗಿದಿದೆ. ಹಾಗಾಗಿ ಆಜಾದ್ ಅವರು ರಾಜ್ಯಸಭೆಗೆ ಪುನರಾಯ್ಕೆ ಆಗುವ ಎಲ್ಲಾ ಸಾಧ್ಯತೆಗಳು ಕಡಿಮೆಯಾಗಿವೆ. ಅದಕ್ಕಿಂತಲೂ ಮುಖ್ಯವಾಗಿ ಪಕ್ಷದ ನಾಯಕತ್ವದ ವಿರುದ್ಧ ಬರೆದ ಪತ್ರದಲ್ಲಿ ಆಜಾದ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಅವರ ರಾಜ್ಯಸಭಾ ಅವಧಿ ಮತ್ತು ಪ್ರತಿಪಕ್ಷ ನಾಯಕನ ಹುದ್ದೆ ಮುಗಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಕಠಿಣ ದಿನಗಳು ಎದುರಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಜಾದ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹರಿಯಾಣ ಕಾಂಗ್ರೆಸ್‌ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ. 2019ರಲ್ಲಿ ಅವರನ್ನು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಲಾಯಿತು. ಅದಕ್ಕಿಂತ ಮುಂಚೆ 2016ರಲ್ಲಿ ಆಜಾದ್ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಲಾಗಿತ್ತು. 2017ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅವರನ್ನು ನೇಮಿಸಲಾಗಿತ್ತು. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿದ ಅವರ ಕ್ರಮ ಪಕ್ಷಕ್ಕೆ‌ನಷ್ಟ ಉಂಟುಮಾಡಿತ್ತು ಎನ್ನುವುದು ಪಕ್ಷದಲ್ಲಿನ ಮೂಲಗಳ ಅಭಿಪ್ರಾಯವಾಗಿದೆ.

ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ನಿರ್ಮಲ ಕತ್ರಿ ಅವರು ಇತ್ತೀಚಿಗೆ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅಜಾದ್ ಅವರ ಈ ‌‌ನಡೆ ಕಾರಣ ಎಂದು ಆರೊಪಿಸಿದ್ದರು. ಆಜಾದ್ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಪತ್ರಕ್ಕೆ ಕತ್ರಿ ಕಿಡಿಕಾರಿದರು. ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಇನ್ನೋರ್ವ ನಾಯಕ ನಸೀಬ್ ಪಠಾಣ್ ಅವರು ಅಜಾದ್ ಅವರನ್ನು ಕಾಂಗ್ರೆಸ್​​ನಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷಕ್ಕೆ ಜಿಲ್ಲಾ ಮಟ್ಟದಿಂದ ಎಸಿಸಿ ಅಧ್ಯಕ್ಷ ಸ್ಥಾನದವರೆಗೂ ಸಾಂಸ್ಥಿಕ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುವ ಗುಂಪಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಆಜಾದ್ ಅವರಿಗೆ ಮುಂದೆ ಕಷ್ಟವಾಗಬಹುದು. ಈಗಾಗಲೇ ಕಾಂಗ್ರೆಸ್​​ನ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಪಕ್ಷದ ಆಂತರಿಕ ಸಮಸ್ಯೆಯನ್ನು ಬಗೆಹರಿಸುವ ಕುರಿತು ಅಜಾದ್ ಅವರಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಆವರು ಎತ್ತಿರುವ ವಿಚಾರದ ಕುರಿತೂ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್​​ನಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಸಣ್ಣ ಬದಲಾವಣೆಗಳಾದರೂ ಹರಿಯಾಣ ಕಾಂಗ್ರೆಸ್ ಉಸ್ತುವಾರಿ ಸ್ಥಾನ ಸೋನಿಯಾ ಗಾಂಧಿ ಬೆಂಬಲಿಗನಿಗೆ ಸಿಗಲಿದೆ. ಏಕೆಂದರೆ ರಾಹುಲ್ ಬೆಂಬಲಿಗ ಅಜಯ್ ಮಕೇನ್ ಅವರನ್ನು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಅವಿನಾಶ್ ಪಾಂಡೆ ಬದಲಿಗೆ ಇತ್ತೀಚಿಗೆ ನೇಮಕ ಮಾಡಲಾಗಿತ್ತು. ಪಾಂಡೆ ನಾಯಕತ್ವದಲ್ಲಿ ರಾಜಸ್ಥಾನ ಕಾಂಗ್ರೆಸ್ ಕಳೆದ ಜುಲೈನಲ್ಲಿ ಸಂಕಷ್ಟವನ್ನು ಎದುರಿಸಿತ್ತು.

ಇನ್ನೊಂದು ಬಹುಮುಖ್ಯ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿರುವುದು ಆಜಾದ್ ಅವರ ಬದಲಿಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಯಾರಾಗುತ್ತಾರೆ ಎನ್ನುವುದಾಗಿದೆ. ವಾಸ್ತವಿಕವಾಗಿ ಹೇಳುವುದಾದರೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ‌‌ಹುದ್ದೆ ಆನಂದ್ ಶರ್ಮಾ ಅವರಿಗೆ ಹೋಗಬೇಕು. ಅವರು ರಾಜ್ಯಸಭೆಯಲ್ಲಿ ಹಲವು ವರ್ಷಗಳಿಂದ ಪ್ರತಿಪಕ್ಷ ಉಪ ನಾಯಕ‌ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಶರ್ಮಾ ಕೂಡ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ. ಹಾಗಾಗಿ ಅವರಿಗೆ ಪ್ರತಿಪಕ್ಷ ನಾಯಕನ ಹೊಣೆಗಾರಿಕೆ ನೀಡುವ ಸಾಧ್ಯತೆ ಕಡಿಮೆ ಇದೆ.‌ ಅವರ ರಾಜ್ಯಸಭೆ ಅವಧಿ ಏಪ್ರಿಲ್‌ 2022ಕ್ಕೆ‌ ಕೊನೆಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಪಕ್ಷದ ನೀತಿ ನಿರೂಪಕರು ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿಲ್ಲ. ಪಕ್ಷದ ಮೂಲಗಳ ಪ್ರಕಾರ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಖರ್ಗೆಯವರು ರಾಜ್ಯಸಭೆಗೆ ಇತ್ತೀಚೆಗೆ ನೇಮಕಗೊಂಡಿದ್ದರು. ಅವರ ಅವಧಿ 2026ಕ್ಕೆ ಕೊನೆಗೊಳ್ಳಲಿದೆ.‌ ಖರ್ಗೆ ಅವರ ನೇಮಕ ಕುರಿತು ಪಕ್ಷದ ವಲಯದಲ್ಲಿ ಅನೌಪಚಾರಿಕವಾಗಿ ಚರ್ಚೆಯಾಗಿದೆ.

ಮುಖ್ಯವಾಗಿ ಸೋನಿಯಾ ಬೆಂಬಲಿಗ ಖರ್ಗೆ ಅವರ ಹೆಸರು ಬಂಡಾಯ ಕಾಂಗ್ರೆಸ್ ನಾಯಕರ ಪಟ್ಟಿಯಲ್ಲಿಲ್ಲ. ಖರ್ಗೆಯವರ ಹೆಸರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮುಂಚೂಣಿಗೆ ಬರುವ ಸಾಧ್ಯತೆ ಇದೆ. ಯಾಕೆಂದರೆ ಪಕ್ಷದ ಹಿರಿಯ ದಲಿತ ನಾಯಕ ಖರ್ಗೆ ಅವರು 9 ಬಾರಿ ಶಾಸಕನಾಗಿ, ಎರಡು ಅವಧಿಗೆ ಲೋಕಸಭಾ ಸದಸ್ಯನಾಗಿ, ಹಾಗೆಯೇ ಯುಪಿಎ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ.

-ಅಮಿತ್ ಅಗ್ನಿಹೋತ್ರಿ

ABOUT THE AUTHOR

...view details