ನವದೆಹಲಿ: ಪೂರ್ವ ಲಡಾಖ್‌ನ ಹಲವಾರು ಸ್ಥಳಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ಮುಖಾಮುಖಿ ನಡುವೆಯೇ ಭಾರತದ ಮೇಲೆ ಸೈಬರ್ ದಾಳಿ ನಡೆಯುವ ಸಾದ್ಯತೆ ಹೆಚ್ಚಾಗಿದೆ.
ಸೈಬರ್ ಭದ್ರತಾ ಘಟನೆಗಳಿಗೆ ಸ್ಪಂದಿಸುವ ಭಾರತದ ಸುಪ್ರೀಂ ಏಜೆನ್ಸಿಯಾದ ಸಿಇಆರ್ಟಿ-ಇನ್ (ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ) ಶುಕ್ರವಾರ ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಮತ್ತು ವ್ಯಾಪಾರ ಸಂಘಗಳನ್ನು ಸೋಗು ಹಾಕುವ ಮೂಲಕ ಭಾರತೀಯ ಘಟಕಗಳ ವಿರುದ್ಧ ದೊಡ್ಡ ಪ್ರಮಾಣದ ಫಿಶಿಂಗ್ ದಾಳಿಯ ಸಲಹಾ ಎಚ್ಚರಿಕೆ ನೀಡಿದೆ.
ಇಂತಹ ಸೈಬರ್ ದಾಳಿಯ ಹಿಂದಿನ ಸಾಮಾನ್ಯ ಶಂಕಿತರ ಬಗ್ಗೆ ಭಾರತದ ರಾಷ್ಟ್ರೀಯ ಸೈಬರ್ ಭದ್ರತಾ ಮುಖ್ಯಸ್ಥರಾಗಿದ್ದ ಗುಲ್ಶನ್ ರೈ, ಇದು ಚೀನಾ ಆಗಿರಬಹುದು, ಪಾಕಿಸ್ತಾನ ಅಥವಾ ಉತ್ತರ ಕೊರಿಯಾ ಆಗಿರಬಹುದು. ಪ್ರಸ್ತುತ ಸನ್ನಿವೇಶದಲ್ಲಿ, ಈ ಮೂರು ದೇಶಗಳು ಈ ಸಮಯದಲ್ಲಿ ಭಾರತದ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿವೆ. ಅವರು ಪ್ರತ್ಯೇಕವಾಗಿ ಅಥವಾ ಸಹಭಾಗಿತ್ವದಲ್ಲಿ ದಾಳಿ ಮಾಡಬಹುದು ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈ ಸೈಬರ್ ದಾಳಿಯು ಅನೇಕ ಕಾರಣಗಳಿಗಾಗಿರಬಹುದು. ಆರ್ಥಿಕ, ಗೂಢಚರ್ಯೆ ಅಥವಾ ಮಿಲಿಟರಿ ಕಾರಣಗಳಿಗಾಗಿರಬಹುದು. ಆದರೆ ಮೊದಲ ಉದ್ದೇಶ ಭಾರತದಲ್ಲಿ ಕಿರುಕುಳ ಮತ್ತು ಭೀತಿಯನ್ನು ಸೃಷ್ಟಿಸುವುದು. ಅದೇ ಸಮಯದಲ್ಲಿ, ಇದು ಡೇಟಾವನ್ನು ಕದಿಯಲು ಮತ್ತು ದೀರ್ಘಾವಧಿಯವರೆಗೆ ವ್ಯವಸ್ಥೆಗೆ ಕಾಟ ನೀಡಲು ಕಾರಣವಾಗುತ್ತದೆ ಎಂದು ರೈ ಹೇಳಿದ್ದಾರೆ.
ಸೈಬರ್ ಭದ್ರತಾ ವಿಷಯಗಳ ಕುರಿತು ಪಿಎಂಒನ ಮಾಜಿ ಸಲಹೆಗಾರ, ಸೈಬರ್ ದಾಳಿಯನ್ನು ಊಹಿಸುವಲ್ಲಿ ಸಂಚಾರ ಮತ್ತು ಪ್ರವೃತ್ತಿ ಪ್ರಮುಖ ಅಂಶಗಳಾಗಿವೆ. ಈಗ ಅಥವಾ ಕೆಲ ದಿನಗಳು ಅಥವಾ ವಾರಗಳ ನಂತರ ನಡೆಯಲಿರುವ ದಾಳಿಯ ಬಗ್ಗೆ ಸಾಕಷ್ಟು ಎಚ್ಚರಿಕೆ ಸೂಚನೆಗಳು ಇರುತ್ತವೆ ಎಂದು ಹೇಳಿದ್ದಾರೆ.