ನವದೆಹಲಿ : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ, 2020 ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಸೈಬರ್ ದಾಳಿಗಳ ಪ್ರಮಾಣ ಶೇ. 37 ರಷ್ಟು ಹೆಚ್ಚಳ ಕಂಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
2020ರ ಮೊದಲ ತ್ರೈಮಾಸಿಕದಲ್ಲೇ ಭಾರತ ಸೈಬರ್ ದಾಳಿಯ ಪ್ರಮಾಣ ಶೇ.37 ಹೆಚ್ಚಳ
ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷದ ಆರಂಭದಲ್ಲೇ ಸೈಬರ್ ದಾಳಿಗಳ ಪ್ರಮಾಣ ಶೇ. 37 ರಷ್ಟು ಹೆಚ್ಚಾಗಿದೆ. ರಿಮೂವೇಬಲ್ ಹಾರ್ಡ್ವೇರ್ಗಳಾದ ಯುಎಸ್ಬಿ ಡ್ರೈವ್ಗಳು, ಹಾರ್ಡ್ ಡಿಸ್ಕ್ ಮತ್ತು ಡಿವಿಡಿಗಳು ಮತ್ತು ಇತರ ಆಫ್ಲೈನ್ ಟೂಲ್ಗಳಿಂದದೂ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ದಾಳಿಗಳು ನಡೆಯುತ್ತಿವೆ ಎಂದು ವರದಿಯೊಂದು ತಿಳಿಸಿದೆ.
ಕಾಸ್ಪರ್ ಸ್ಕೈ ನೆಟ್ವರ್ಕ್ (ಕೆಎಸ್ಎನ್) ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ವರ್ಷದ ಜನವರಿಯಿಂದ ಮಾರ್ಚ್ವರೆಗೆ ಭಾರತದಲ್ಲಿ 52,820,874 ಸ್ಥಳೀಯ ಸೈಬರ್ ಬೆದರಿಕೆಗಳನ್ನು ಕೆಎಸ್ಎನ್ ಉತ್ಪನ್ನಗಳು ಪತ್ತೆ ಹಚ್ಚಿವೆ ಮತ್ತು ಅದರಿಂದಾಗುವ ದಾಳಿಯನ್ನು ತಡೆದಿವೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲೇ ಭಾರತ ಸೈಬರ್ ದಾಳಿಯಲ್ಲಿ ಜಗತ್ತಿನಲ್ಲಿ 27ನೇ ಸ್ಥಾನಕ್ಕೆ ಬಂದು ತಲುಪಿದೆ. ಕಳೆದ ವರ್ಷ ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆ 32ನೇ ಸ್ಥಾನದಲ್ಲಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಸ್ಪರ್ ಸ್ಕೈ ಗ್ರೇಟ್ ಎಷ್ಯಾ ಫೆಸಿಫಿಕ್ ಹಿರಿಯ ಭದ್ರತಾ ಸಂಶೋಧಕ ಸೌರ ಶರ್ಮಾ, ಈ ವರ್ಷ ಮೊದಲನೇ ತ್ರೈ ಮಾಸಿಕದಲ್ಲೇ ಸೈಬರ್ ದಾಳಿಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದು, ಇದು ಎರಡನೇ ತ್ರೈಮಾಸಿಕಕ್ಕೆ ಮತ್ತಷ್ಟು ಏರಿಕೆಯಾಗಬಹುದು. ಪ್ರಸ್ತುತ ಸಂದರ್ಭದಲ್ಲಿ ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಏರಿಕೆ ಕಾಣುತ್ತಿದೆ. ಮೊದಲನೆ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಂಡು ಬಂದ ಸೈಬರ್ ದಾಳಿಯ ಪ್ರಕರಣಗಳು ಹೆಚ್ಚಾಗಿ ರಿಮೂವೇಬಲ್ ಹಾರ್ಡ್ವೇರ್ಗಳಾದ ಯುಎಸ್ಬಿ ಡ್ರೈವ್ಗಳು, ಹಾರ್ಡ್ ಡಿಸ್ಕ್ ಮತ್ತು ಡಿವಿಡಿಗಳು ಮತ್ತು ಇತರ ಆಫ್ಲೈನ್ ಟೂಲ್ಗಳಿಂದ ನಡೆದಿವೆ ಎಂದಿದ್ಧಾರೆ.