ನವದೆಹಲಿ: ಕೊರೊನಾ ವೈರಸ್ ಕಾರಣದಿಂದಾಗಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಭಾರತ- ಪಾಕಿಸ್ತಾನ ನಡುವಿನ ವಾಘಾ- ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಂದು ತಿಳಿಸಿದೆ.
ಗಣರಾಜ್ಯೋತ್ಸವದಂದು ವಾಘಾ ಗಡಿಯಲ್ಲಿ ಎಂದಿನಂತೆ ಧ್ವಜಾರೋಹಣ ನಡೆಸಲಾಗುತ್ತದೆ. ಆದರೆ ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ನಡೆಯಲಿರುವ ಬೀಟಿಂಗ್ ರೀಟ್ರಿಟ್ ನಡೆಯುವುದಿಲ್ಲ. ಜೊತೆಗೆ ಸಾರ್ವಜನಿಕರಿಗೂ ಅವಕಾಶ ನೀಡುವುದಿಲ್ಲ ಎಂದು ಬಿಎಸ್ಎಫ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಯುವಕರು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು : ಐಜಿಪಿ
ಕಳೆದ ವರ್ಷವೂ ಕೂಡಾ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇವಲ 16 ಬಿಎಸ್ಎಫ್ ಸಿಬ್ಬಂದಿಯೊಂದಿಗೆ ಬೀಟಿಂಗ್ ರೀಟ್ರಿಟ್ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಮಾರಂಭಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ.
ವಾಘಾ- ಅಟ್ಟಾರಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೌಹಾರ್ದತೆಯ ಸೂಚಕವಾಗಿ ಬೀಟಿಂಗ್ ರಿಟ್ರೀಟ್ ಅನ್ನು 1959ರಲ್ಲಿ ಪ್ರಾರಂಭಿಸಿದ್ದವು. ಸುಮಾರು 60 ವರ್ಷಗಳಿಂದ ಬೀಟಿಂಗ್ ರೀಟ್ರಿಟ್ ಜಾರಿಯಲ್ಲಿದೆ.