ಇಡುಕ್ಕಿ (ಕೇರಳ): ಆಕೆಯ ವಯಸ್ಸು 68. ಕಠಿಣ ಪರಿಶ್ರಮಿ, ಅಪರಿಮಿತ ಜೀವನೋತ್ಸಾಹಿ. ತಾನು ಪ್ರೀತಿಸುವ ಕೃಷಿ ಕೆಲಸ ಮಾಡುವ ಉತ್ಸಾಹ ನೋಡಿದರೆ ಎಂಥವರೂ ಅರೆಕ್ಷಣ ಬೆರಗಾಗಲೇಬೇಕು.
ಇಳಿವಯಸ್ಸಿನಲ್ಲಿ ಇವರು ತರುಣರಂತೆ ತೆಂಗಿನ ಮರ ಹತ್ತಬಲ್ಲರು. ಮರದ ತುದಿ ಸ್ವಚ್ಛಗೊಳಿಸಿ, ಮಾಗಿದ ತೆಂಗಿನಕಾಯಿಗಳನ್ನು ಕೀಳುವರು. ಅಷ್ಟೇ ಅಲ್ಲ, ಕೃಷಿಯಲ್ಲಿ ಈ ಅಜ್ಜಿಯದ್ದು ಎತ್ತಿದ ಕೈ. ಜೀವನದ ಸಂಧ್ಯಾಕಾಲದಲ್ಲೂ ಯಾವುದೇ ಅಡೆತಡೆಯಿಲ್ಲದೇ ಕೃಷಿಯಲ್ಲಿ ಖುಷಿಯಿಂದ ತೊಡಗಿ ಯುವಕರೇ ನಾಚುವಂತೆ ಮಾಡುತ್ತಾರೆ.
ಕೇರಳದ ಇಡುಕ್ಕಿಯ ಆದಿಮಾಲಿಯ ಇರುಂಬುಪಾಲಂ ನಿವಾಸಿಯಾದ ಮರಿಯಮಕುಟ್ಟಿ ವರ್ಗೀಸ್ ಎಂಬ ಅಜ್ಜಿಗೆ ಕೃಷಿಯಲ್ಲಿರುವ ಅದಮ್ಯ ಇಚ್ಛಾಶಕ್ತಿ, ಅವರ ಉತ್ಸಾಹ ಎಂತಹವರಿಗೂ ಮಾದರಿ ಎನ್ನುವಂತಿದೆ. ತಮ್ಮ 22ನೇ ವಯಸ್ಸಿನಲ್ಲೇ ಕೃಷಿ ಕಾಯಕ ಆರಂಭಿಸಿರುವ ಮರಿಯಮಕುಟ್ಟಿ ಸತತವಾಗಿ 46 ವರ್ಷಗಳಿಂದ ದಣಿವಿಲ್ಲದೆ ತಾನು ಪ್ರೀತಿಸುವ ಕೆಲಸದಲ್ಲಿ ತೊಡಿಸಿಕೊಂಡಿದ್ದಾರೆ. ಮೂರೂವರೆ ಎಕರೆ ತಮ್ಮ ಕೃಷಿ ಭೂಮಿಯಲ್ಲಿ ಎಲ್ಲ ಸಂಕಷ್ಟದ ಪರಿಸ್ಥಿತಿಗಳನ್ನೂ ಮೆಟ್ಟಿ ನಿಂತು ವಿಸ್ಮಯ ಮೂಡಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಜಮೀನಿನಲ್ಲಿ ಹಾಜರಿರುವ ಅಜ್ಜಿ, ರಬ್ಬರ್ ಮರಗಳ ಟ್ಯಾಪಿಂಗ್ ಮೂಲಕ ಕೃಷಿ ಕೆಲಸ ಪ್ರಾರಂಭಿಸುತ್ತಾರೆ. ನಂತರ ದನ, ಮೇಕೆಗಳಿಗೆ ಮೇವು, ನೀರುಣಿಸುವ ಮೂಲಕ ಅವುಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಂದ ಮೆಣಸು, ಜಾಯಿಕಾಯಿ, ಏಲಕ್ಕಿ ಮತ್ತು ತೆಂಗಿನಕಾಯಿಯ ಕೃಷಿಯಲ್ಲಿ ಮಗ್ನರಾಗುತ್ತಾರೆ.