ಕರ್ನಾಟಕ

karnataka

By

Published : Jul 6, 2023, 1:25 PM IST

ETV Bharat / bharat

Appointment of Chief Justices: 7 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ದೇಶದ ಏಳು ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

SC Collegium recommends appointment of chief justices for 7 HCs
SC Collegium recommends appointment of chief justices for 7 HCs

ನವದೆಹಲಿ : ಕೇರಳ, ಒಡಿಶಾ, ಮಣಿಪುರ, ಆಂಧ್ರಪ್ರದೇಶ, ಬಾಂಬೆ, ತೆಲಂಗಾಣ ಮತ್ತು ಗುಜರಾತ್ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಹೊರತಾಗಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡಿದೆ.

ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಆಶಿಶ್ ಜೆ. ದೇಸಾಯಿ ಅವರನ್ನು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಎಸ್. ವೆಂಕಟನಾರಾಯಣ ಭಟ್ಟಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿದ ನಂತರ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಹುದ್ದೆ ಖಾಲಿಯಾಗಿತ್ತು.

ಜಸ್ಟಿಸ್ ಆಶಿಶ್ ಜೆ. ದೇಸಾಯಿ ಅವರು ನವೆಂಬರ್ 2011ರಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಹೈಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ ಮತ್ತು ಪ್ರಸ್ತುತ ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಅವರ ಹೆಸರನ್ನು ಶಿಫಾರಸು ಮಾಡುವಾಗ, ಗುಜರಾತ್‌ನ ಹೈಕೋರ್ಟ್‌ಗೆ ಪ್ರಸ್ತುತ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೊಲಿಜಿಯಂ ಹೇಳಿದೆ.

ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಸಿಸ್ ತಾಲಪಾತ್ರ ಅವರನ್ನು ಒರಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ಡಾ. ಜಸ್ಟಿಸ್ ಎಸ್. ಮುರಳೀಧರ್ ಅವರ ನಿವೃತ್ತಿಯ ಪರಿಣಾಮವಾಗಿ ಆಗಸ್ಟ್ 2023ರಲ್ಲಿ ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಹುದ್ದೆ ಖಾಲಿಯಾಗಿತ್ತು. "ಸುಭಾಸಿಸ್ ತಾಲಪಾತ್ರ ಅವರು ಜೂನ್ 10, 2022 ರಿಂದ ಒಡಿಶಾ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಎರಡು ಹೈಕೋರ್ಟ್‌ಗಳಲ್ಲಿ ನ್ಯಾಯದಾನದಲ್ಲಿ ಸಾಕಷ್ಟು ಅನುಭವವನ್ನು ಗಳಿಸಿದ್ದಾರೆ" ಎಂದು ಕೊಲಿಜಿಯಂ ಹೊರಡಿಸಿದ ಹೇಳಿಕೆ ತಿಳಿಸಿದೆ.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ ಅವರನ್ನು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ ಕಾರಣದಿಂದ ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಹುದ್ದೆ ಫೆಬ್ರವರಿ 2023 ರಲ್ಲಿ ಖಾಲಿಯಾಗಿತ್ತು. ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರು ಮಾರ್ಚ್ 2008 ರಲ್ಲಿ ದೆಹಲಿಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಹೈಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ಮೇ 19 ರಂದು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಿದ ನಂತರ ಆಂಧ್ರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಹುದ್ದೆ ಖಾಲಿಯಾಗಿದೆ.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರನ್ನು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ರಮೇಶ್ ಡಿ. ಧನುಕಾ ಅವರ ನಿವೃತ್ತಿಯ ಪರಿಣಾಮವಾಗಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಇತ್ತೀಚೆಗೆ ಒಂದು ಹುದ್ದೆ ಖಾಲಿಯಾಗಿತ್ತು. ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು 2011 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅವರು ದೇಶದ ಅತಿದೊಡ್ಡ ಹೈಕೋರ್ಟ್‌ನಲ್ಲಿ ನ್ಯಾಯ ವಿತರಿಸುವಲ್ಲಿ 11 ವರ್ಷಗಳಿಗೂ ಹೆಚ್ಚು ಅನುಭವವನ್ನು ಗಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಿದ ನಂತರ ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಹುದ್ದೆ ಖಾಲಿಯಾಗಿತ್ತು. ನ್ಯಾಯಮೂರ್ತಿ ಅಲೋಕ್ ಆರಾಧೆ ಅವರು ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದರು. ಅವರು ನವೆಂಬರ್ 2018ರಿಂದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದೇಶದ ಎರಡು ದೊಡ್ಡ ಹೈಕೋರ್ಟ್‌ಗಳಲ್ಲಿ ನ್ಯಾಯ ವಿತರಿಸುವಲ್ಲಿ 13 ವರ್ಷಗಳಿಗೂ ಹೆಚ್ಚು ಅನುಭವ ಗಳಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ಅವರನ್ನು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಅವರು ಹೈಕೋರ್ಟ್‌ನ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎಂದು ಕೊಲಿಜಿಯಂ ಹೇಳಿದೆ. ಪ್ರಸ್ತುತ ದೇಶದ ಯಾವುದೇ ಹೈಕೋರ್ಟ್‌ಗಳಲ್ಲಿ ಮಹಿಳಾ ಮುಖ್ಯ ನ್ಯಾಯಮೂರ್ತಿ ಇಲ್ಲ. ನ್ಯಾಯಮೂರ್ತಿ ಸೋನಿಯಾ ಜಿ. ಗೋಕನಿ ಅವರ ನಿವೃತ್ತಿಯ ಪರಿಣಾಮವಾಗಿ ಗುಜರಾತ್‌ನ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಹುದ್ದೆ ಖಾಲಿಯಾಗಿತ್ತು.

ಇದನ್ನೂ ಓದಿ :ಕಾವೇರಿ ನಮ್ಮ ಜೀವನದ ಪ್ರಶ್ನೆ, ಮೇಕೆದಾಟು ಅಣೆಕಟ್ಟೆಗೆ ಅವಕಾಶ ನೀಡಲ್ಲ: ತಮಿಳುನಾಡು ಸಚಿವ

ABOUT THE AUTHOR

...view details