ನವದೆಹಲಿ: ಮಣಿಪುರ ಪರಿಸ್ಥಿತಿ ಕುರಿತು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಂಸತ್ ಭವನದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಗೆ ಮರಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮಿತ್ ಶಾ ವಿಪಕ್ಷ ನಾಯಕರಿಗೆ ಭರವಸೆ ನೀಡಿದ್ದಾರೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ತಿಳಿಸಿದ್ದಾರೆ.
ಕಳೆದ 50 ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದ್ದರಿಂದ ಇಂದು ಗೃಹ ಸಚಿವರು ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಈ ಮಹತ್ವದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಪ್ರಮುಖವಾಗಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ (ಕಾಂಗ್ರೆಸ್), ಡೆರೆಕ್ ಒಬ್ರಿಯಾನ್ (ತೃಣಮೂಲ ಕಾಂಗ್ರೆಸ್), ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಿಂಗ್ (ಎನ್‌ಪಿಪಿ), ಎಂ ತಂಬಿ ದುರೈ (ಎಐಎಡಿಎಂಕೆ), ತಿರುಚಿ ಶಿವ (ಡಿಎಂಕೆ), ಪಿನಾಕಿ ಮಿಶ್ರಾ (ಬಿಜೆಡಿ), ಸಂಜಯ್ ಸಿಂಗ್ (ಆಮ್ ಆದ್ಮಿ ಪಕ್ಷ), ಮನೋಜ್ ಝಾ (ಆರ್‌ಜೆಡಿ) ಮತ್ತು ಪ್ರಿಯಾಂಕಾ ಚತುರ್ವೇದಿ (ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತ್ಯಾನಂದ ರೈ ಮತ್ತು ಅಜಯ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಗುಪ್ತಚರ ಬ್ಯೂರೋದ ನಿರ್ದೇಶಕ ತಪನ್ ದೇಕಾ ಪಾಲ್ಗೊಂಡಿದ್ದರು.
ಈ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದ ತಿರುಚಿ ಶಿವ, ಕಳೆದ 50 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯಕ್ಕೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ಮತ್ತು ಮಣಿಪುರಕ್ಕೆ ಸರ್ವಪಕ್ಷ ನಿಯೋಗಕ್ಕೆ ಭೇಟಿಗೆ ಅವಕಾಶ ನೀಡಲು ಪ್ರತಿಪಕ್ಷದ ನಾಯಕರು ಒಮ್ಮತದಿಂದ ಅಮಿತ್ ಶಾ ಅವರನ್ನು ಒತ್ತಾಯಿಸಿದರು ಎಂದು ಹೇಳಿದರು.