ನವದೆಹಲಿ: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ 14 ನಾಗರಿಕರನ್ನು ಬರ್ಬರವಾಗಿ ಕೊಂದ ಕೆಲವು ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಗಾಲ್ಯಾಂಡ್‌ನ ಪರಿಸ್ಥಿತಿಯ ಬಗ್ಗೆ ರಾಜ್ಯ ಮುಖ್ಯಮಂತ್ರಿ ನೀಫಿಯು ರಿಯೊ ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಚರ್ಚಿಸಿದ್ದಾರೆ.
ನಿರ್ಣಾಯಕ ಸಭೆಗೆ ಗುರುವಾರ ರಾತ್ರಿ ಇಬ್ಬರೂ ಮುಖ್ಯಮಂತ್ರಿಗಳನ್ನು ಶಾ ಕರೆದಿದ್ದಾರೆ ಎಂದು ಅಸ್ಸೋಂ ಮುಖ್ಯಮಂತ್ರಿಯ ನಿಕಟವರ್ತಿ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಅಮಿತ್ ಶಾ ಅವರ ಕೃಷ್ಣ ಮೆನನ್ ಮಾರ್ಗದ ನಿವಾಸದಲ್ಲಿ ನಡೆದ ಸಭೆ ಗುರುವಾರ ತಡರಾತ್ರಿಯವರೆಗೂ ಮುಂದುವರೆಯಿತು. ಸಭೆಯ ನಂತರ ಶರ್ಮಾ ಮತ್ತು ರಿಯೊ ಇಬ್ಬರೂ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹೊರಟರು.
ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ನಾಗಾಲ್ಯಾಂಡ್ ಉಪಮುಖ್ಯಮಂತ್ರಿ ಯಾಂತುಂಗೋ ಪ್ಯಾಟನ್ ಮತ್ತು ನಾಗಾಲ್ಯಾಂಡ್ ಮಾಜಿ ಮುಖ್ಯಮಂತ್ರಿ ಟಿಆರ್ ಝೆಲಿಯಾಂಗ್ ಕೂಡ ಭಾಗವಹಿಸಿದ್ದರು.