ನವದೆಹಲಿ:ಶ್ರದ್ಧಾ ವಾಲ್ಕರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ, ಆಕೆ ಇನ್ನೂ ಬದುಕಿದ್ದಾಳೆಂದು ಜಗತ್ತಿಗೆ ತೋರಿಸಲು, ಆತ ಜೂನ್ವರೆಗೆ ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಚಾಲನೆಯಲ್ಲಿಟ್ಟಿದ್ದ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ತಿಳಿಯಲು ಪೊಲೀಸ್ ತಂಡಗಳು ಅವರ ಫೋನ್ ಅನ್ನು ಸ್ಕ್ಯಾನ್ ಮಾಡುತ್ತಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಮೆಹ್ರೌಲಿ ಪ್ರದೇಶದಲ್ಲಿ ಮೇ 18 ರಂದು ತನ್ನ ಲಿವ್-ಇನ್ ಪಾರ್ಟನರ್ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಅವಧಿಯಲ್ಲಿ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕೊನೆಗೂ ಶನಿವಾರ ಬಂಧಿಸಲಾಗಿದೆ.
26ರ ಹರೆಯದ ಶ್ರದ್ಧಾ ಕೆಲವೊಮ್ಮೆ ಅಫ್ತಾಬ್ ತನ್ನನ್ನು ಥಳಿಸುತ್ತಾನೆ ಎಂದು ತಾಯಿಗೆ ತಿಳಿಸುತ್ತಿದ್ದಳು ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ಎಫ್‌ಐಆರ್ ಪ್ರಕಾರ, ಸಂತ್ರಸ್ತೆಯ ಕುಟುಂಬವು ಇವರಿಬ್ಬರ ಸಂಬಂಧವನ್ನು ಒಪ್ಪಿರಲಿಲ್ಲ. ಆದರೆ ತನಗೆ 25 ವರ್ಷ ವಯಸ್ಸಾಗಿದ್ದರಿಂದ ತಾನು ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹೊಂದಿದ್ದೇನೆ ಎಂದು ಹೇಳಿ ಸಂಬಂಧವನ್ನು ಮುಂದುವರಿಸಿದ್ದಳು.