ನವದೆಹಲಿ: ಇನ್ನೂ 13 ಯುರೋಪಿಯನ್ ಯೂನಿಯನ್ ದೇಶಗಳು ಭಾರತದ ಕೋವಿಡ್ ಲಸಿಕೆಯಾದ ಕೋವಿಶೀಲ್ಡ್ ಅನ್ನು ಒಪ್ಪಿಕೊಂಡಿಲ್ಲ. ಇದರ ನಡುವೆ ಈ ರಾಷ್ಟ್ರಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಕ್ವಾರಂಟೈನ್ ವೆಚ್ಚವನ್ನು ಭರಿಸಬೇಕಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸುವುದಾಗಿ ಸೀರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಆದರ್ ಪೂನವಾಲ್ಲಾ ಘೋಷಿಸಿದ್ದಾರೆ.
"ಪ್ರಿಯ ವಿದ್ಯಾರ್ಥಿಗಳೇ ಕ್ವಾರಂಟೈನ್ ಇಲ್ಲದೇ ಪ್ರಯಾಣಿಸಲು ಸ್ವೀಕಾರಾರ್ಹ ಲಸಿಕೆಯಾಗಿ ಕೋವಿಶೀಲ್ಡ್ ಅನ್ನು ಇನ್ನೂ ಕೆಲವು ದೇಶಗಳು ಅನುಮೋದಿಸಿಲ್ಲ. ನೀವು ಕೆಲವು ವೆಚ್ಚಗಳನ್ನು ಭರಿಸಬೇಕಾಗಬಹುದು. ಇದಕ್ಕಾಗಿ ನಾನು 10 ಕೋಟಿ ರೂ. ಮೀಸಲಿಟ್ಟಿದ್ದೇನೆ. ಅಗತ್ಯವಿದ್ದರೆ ಹಣಕಾಸಿನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿ" ಎಂದು ಸೀರಂ ಸಿಇಒ ಟ್ವೀಟ್ ಮೂಲಕ ಲಿಂಕ್ ಶೇರ್ ಮಾಡಿದ್ದಾರೆ.
ಕೊರೊನಾ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ ಯುರೋಪಿಯನ್ ರಾಷ್ಟ್ರಗಳು ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿವೆ. ಕೋವಿಡ್-19 ಟ್ರಾವೆಲ್ ಸರ್ಟಿಫಿಕೇಟ್ ಒದಗಿಸುತ್ತಿವೆ, ಪ್ರವೇಶ ನಿರ್ಬಂಧಗಳನ್ನು ತೆಗೆದು ಹಾಕುತ್ತಿವೆ. ಎಲ್ಲಾ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಜುಲೈ 1 ರಿಂದ ಯುರೋಪ್ ಖಂಡದಾದ್ಯಂತ ಪ್ರಯಾಣಿಸಲು 'ಗ್ರೀನ್ ಪಾಸ್'ಗೆ ಒಪ್ಪಿಕೊಂಡಿವೆ. ಪ್ರಯಾಣಿಕರ ಸ್ಥಿತಿಗತಿ ಆಧರಿಸಿ ಲಸಿಕಾ ಪಾಸ್ಪೋರ್ಟ್, ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಹಾಗೂ ಚೇತರಿಕೆ ಪ್ರಮಾಣಪತ್ರ ಎಂಬ ಮೂರು ಬಗೆಯ ಸರ್ಟಿಫಿಕೇಟ್ ಸಲ್ಲಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಕೋವಿಡ್ನಿಂದ ಪೋಷಕರ ಕಳೆದುಕೊಂಡ ವಿದ್ಯಾರ್ಥಿನಿ: CBSEಯಲ್ಲಿ ಗಳಿಸಿದ್ದು ಶೇ.99.8!
ಸೀರಂ ಹಾಗೂ ಅಸ್ಟ್ರಾಜೆನೆಕಾದ ಸಹಭಾಗಿತ್ವದಲ್ಲಿ ತಯಾರಿಸಲ್ಪ ಕೋವಿಶೀಲ್ಡ್ ಲಸಿಕೆಯನ್ನು 16 ಯುರೋಪಿಯನ್ ರಾಷ್ಟ್ರಗಳಲ್ಲಿ ಅನುಮೋದಿಸಲಾಗಿದೆ.