ವೈಶಾಲಿ(ಬಿಹಾರ):ಬಿಹಾರದ ವೈಶಾಲಿ ಜಿಲ್ಲೆಯ ಅಭಯ್ ಕುಮಾರ್ ಎಂಬವರು ತಮ್ಮ ನೆನಪಿನ ಶಕ್ತಿಯ ಮೂಲಕವೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ 3 ಬಾರಿ ತಮ್ಮ ಹೆಸರು ದಾಖಲಿಸಿದ್ದಾರೆ. ಮೈಂಡ್ ಮತ್ತು ಮೆಮೊರಿ ಕೋಚ್ ಆಗಿರುವ ಇವರು, ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ಇಂತಹ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ ಎಂಬುದು ವಿಶೇಷ.
ಹಾಜಿಪುರದ ನಿವಾಸಿ 30 ವರ್ಷದ ಅಭಯ್ ಕುಮಾರ್ ವೃತ್ತಿಯಲ್ಲಿ ಪ್ರಾಧ್ಯಾಪಕರು. ಇವರು ಸಹೇಂದ್ರ ಪಾಸ್ವಾನ್ ಹಾಗೂ ಪ್ರೇಮ್ ಶೀಲಾಕುಮಾರಿ ದಂಪತಿಯ ಪುತ್ರ. ಉನ್ನತ ಶಿಕ್ಷಣದ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇವರ ನೆನಪಿನ ಶಕ್ತಿ ಹೇಗಿದೆ ಎಂದರೆ, ಕಂಪ್ಯೂಟರ್ಗಿಂತ ಇವರ ಮೆದುಳು ತುಂಬಾ ವೇಗವಾಗಿ ಓಡುತ್ತದೆ ಮತ್ತು ಕೆಲಸ ಮಾಡುತ್ತದೆ. ಇದರಿಂದಾಗಿಯೇ ಇವರು ತಮ್ಮ ಮೂರು ಗಿನ್ನೆಸ್ ದಾಖಲೆಗಳಲ್ಲಿ ತಮ್ಮದೇ ಆದ ಒಂದು ದಾಖಲೆ ಮುರಿದು ಮತ್ತೊಂದು ಸೇರ್ಪಡೆ ಮಾಡಿದ್ದಾರೆ. ಈ ಮೂಲಕ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಭಯ್ ಈಗ ಅಸಾಮಾನ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಅಭಯ್ ಗಿನ್ನೆಸ್ ದಾಖಲೆಗಳೇನು?:ಅಭಯ್ ಕುಮಾರ್ ಮೆದುಳು ಅತ್ಯಂತ ಚುರುಕವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕ್ರಿಸ್ತಶಕ ಒಂದರಿಂದ ಮುಂದಿನ ಹತ್ತು ಸಾವಿರ ವರ್ಷಗಳವರೆಗಿನ ಯಾವುದೇ ತಾರೀಖಿನ ದಿನವನ್ನು ಕೇಳಿದರೂ ಕ್ಷಣ ಮಾತ್ರದಲ್ಲೇ ಹೇಳಲು ಪ್ರಯತ್ನಿಸುವ ಸಾಮರ್ಥ್ಯ ಇವರಿಗಿದೆ. ಮೊದಲ ಬಾರಿಗೆ 16 ಕ್ಯಾಲೆಂಡರ್ ತಾರೀಕುಗಳ ದಿನವನ್ನು (ಯಾವ ವಾರ ಎಂಬುವುದು) ಒಂದೇ ನಿಮಿಷದಲ್ಲಿ ನೀಡಿ ಗಿನ್ನೆಸ್ ಪುಟದಲ್ಲಿ ತಮ್ಮ ಹೆಸರು ದಾಖಲಿಸಿದ್ದರು. ಉದಾಹರಣೆಗೆ, 4621ನೇ ಇಸ್ವಿಯ ಫೆಬ್ರವರಿ 14, ಯಾವ ವಾರ ಅಥವಾ ಯಾವ ದಿನವಾಗುತ್ತದೆ? ಎಂದು ಕೇಳಿದರೆ, ಇದನ್ನು ಅಭಯ್ ತಕ್ಷಣವೇ ಭಾನುವಾರ ಎಂದು ಹೇಳಿಬಿಡುತ್ತಾರೆ.