ಅಮೃತಸರ (ಪಂಜಾಬ್) :ಮಜಿತಾ ರಸ್ತೆಯಲ್ಲಿರುವ ಔಷಧ ಕಾರ್ಖಾನೆಯಲ್ಲಿ ನಿನ್ನೆ ಸಂಜೆ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಸುಮಾರು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ, ನಾಗ್ ಕಲಾನ್ ಗ್ರಾಮದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 6ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ಕುಟುಂಬಸ್ಥರು ತಡರಾತ್ರಿಯಾದರೂ ಮನೆಗೆ ತಮ್ಮ ಮಕ್ಕಳು ಬಂದಿಲ್ಲ ಎಂದು ಕಾರ್ಖಾನೆ ಹತ್ತಿರ ಹುಡುಕುತ್ತಿದ್ದಾರೆ. ಭೀಕರ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದರು.
ಆಡಳಿತಕ್ಕೆ ಕುಟುಂಬಗಳು ಮನವಿ: ತಮ್ಮ ಕುಟುಂಬದ ಸದಸ್ಯರು ಈ ಕಾರ್ಖಾನೆಯಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದು, ದಿನವೂ ಸಮಯಕ್ಕೆ ಸರಿಯಾಗಿ ಮನೆಗೆ ತಲುಪುತ್ತಿದ್ದರು. ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಪಡೆದು ನಾವು ಇಲ್ಲಿಗೆ ಬಂದು ನೋಡಿದಾಗ ಅವರು ಕಾಣಿಸಲಿಲ್ಲ. ಕಾರ್ಖಾನೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳನ್ನು ಆದಷ್ಟು ಬೇಗ ಪತ್ತೆ ಮಾಡಿಕೊಡಬೇಕು ಎಂದು ನಾಪತ್ತೆಯಾದ ಯುವಕರ ಕುಟುಂಬಸ್ಥರು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.