ಕರ್ನಾಟಕ

karnataka

ETV Bharat / bharat

ಅಮೃತಸರದ ಗಡಿ ಗ್ರಾಮದಲ್ಲಿ 565 ಗ್ರಾಂ ಹೆರಾಯಿನ್ ವಶಕ್ಕೆ ಪಡೆದ ಬಿಎಸ್ಎಫ್

ಪಂಜಾಬ್​ನ ಅಮೃತಸರದ ಗಡಿ ಗ್ರಾಮದಲ್ಲಿ 565 ಗ್ರಾಂ ಹೆರಾಯಿನ್​ ಅನ್ನು ಬಿಎಸ್​ಎಫ್ ಪಡೆ ವಶಕ್ಕೆ ಪಡೆದಿದೆ.

By ETV Bharat Karnataka Team

Published : Nov 21, 2023, 3:56 PM IST

ಬಿಎಸ್ಎಫ್ ಪಡೆ
ಬಿಎಸ್ಎಫ್ ಪಡೆ

ಚಂಡೀಗಢ (ಪಂಜಾಬ್​): ಪಂಜಾಬ್‌ನ ಅಮೃತಸರ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿಯ ಮೈದಾನದಿಂದ ಪಾಕಿಸ್ತಾನದ ಡ್ರೋನ್‌ನಿಂದ ಏರ್‌ಡ್ರಾಪ್ ಮಾಡಲಾದ 565 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಬಿಎಸ್‌ಎಫ್ ಮಂಗಳವಾರ ತಿಳಿಸಿದೆ.

ನವೆಂಬರ್ 20 ಮತ್ತು 21 ರ ಮಧ್ಯರಾತ್ರಿಯಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ಪಡೆಗಳು ಮೋಡ್ ಹಳ್ಳಿಯಲ್ಲಿ ಡ್ರೋನ್ ತಡೆದಿವೆ. ಆಗ ನೆಲದ ಮೇಲೆ ಏನೋ ಬಿದ್ದ ಶಬ್ದ ಅವರಿಗೆ ಕೇಳಿಸಿದೆ. ತದನಂತರ ಹುಡುಕಾಟ ನಡೆಸಿದ ಬಿಎಸ್​ಎಫ್​ ಪಡೆಗಳಿಗೆ 565 ಗ್ರಾಂ ಹೆರಾಯಿನ್ ಹೊಂದಿರುವ ಹಳದಿ ಟೇಪ್‌ನಲ್ಲಿ ಸುತ್ತಿದ ಪ್ಯಾಕೆಟ್ ಕಂಡುಬಂದಿದೆ. ನಂತರ ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಾಗಣೆಯ ಅಂತಾರಾಷ್ಟ್ರೀಯ ಬೆಲೆ ಸುಮಾರು 3.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನೂ ಆರಂಭಿಸಲಾಗಿದೆ. ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ x( ಈ ಹಿಂದಿನ ಟ್ವಿಟರ್​) ಮೂಲಕ ಹಂಚಿಕೊಂಡಿದೆ.

ಪಂಜಾಬ್ ಬಿಎಸ್ಎಫ್ ಪಡೆಗಳು ಡ್ರೋನ್ ಒಳನುಸುಳುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಿ ಹೆರಾಯಿನ್ ವಶಪಡಿಸಿಕೊಂಡಿವೆ. ಡ್ರೋನ್ ಆಕ್ರಮಣಕ್ಕೆ ಪಡೆಗಳು ತ್ವರಿತವಾಗಿ ಪ್ರತಿಕ್ರಿಯಿಸಿದವು. ಅದು ಪಾಕಿಸ್ತಾನಕ್ಕೆ ಹಿಂದಿರುಗುವ ಮೊದಲು ಡ್ರಗ್ಸ್ ಅನ್ನು ಕೈಬಿಟ್ಟಿತು. ಈ ಮೂಲಕ ಭಾರತದ ಪ್ರದೇಶಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡುವ ಪಾಕಿಸ್ತಾನಿ ಸ್ಮಗ್ಲರ್‌ಗಳ ಮತ್ತೊಂದು ಪ್ರಯತ್ನವನ್ನು ಬಿಎಸ್‌ಎಫ್ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ ಎಂದು ಪಂಜಾಬ್ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.

84 ಕೋಟಿ ಮೌಲ್ಯದ 12 ಕೆ. ಜಿ ಹೆರಾಯಿನ್ ವಶ : ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಕಳ್ಳಸಾಗಣೆದಾರರಿಗೆ ಪಂಜಾಬ್ ಪೊಲೀಸರು ಬಿಗ್​ ಶಾಕ್ (ಅಕ್ಟೋಬರ್- 12-2023)​ ನೀಡಿದ್ದರು. ಪಂಜಾಬ್ ಪೊಲೀಸರು ದೇಶದ ಗಡಿಭಾಗಕ್ಕೆ ಕಳುಹಿಸಲಾದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಅಷ್ಟೇ ಅಲ್ಲ, ಫಿರೋಜ್‌ಪುರದ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡ ಇಬ್ಬರು ಭಾರತೀಯ ಕಳ್ಳಸಾಗಣೆದಾರರನ್ನು ಬಂಧಿಸಿತ್ತು. ಕಳ್ಳಸಾಗಾಣಿಕೆದಾರರು ಈ ಸರಕುಗಳನ್ನು ಗಡಿಯಾಚೆಯಿಂದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದರು ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.

ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ಪಂಜಾಬ್ ಡಿಜಿಪಿ : ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. 'ಟ್ರಾನ್ಸ್-ಬಾರ್ಡರ್ ಡ್ರಗ್ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಗುಪ್ತಚರ ಸಂಸ್ಥೆ ನೇತೃತ್ವದ ಕಾರ್ಯಾಚರಣೆ ಸಂದರ್ಭದಲ್ಲಿ, ಸಿಐ ಫಿರೋಜ್‌ಪುರ 2 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಬಂಧಿತರಿಂದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ:84 ಕೋಟಿ ಮೌಲ್ಯದ 12 ಕೆ.ಜಿ ಹೆರಾಯಿನ್ ವಶ: ಇಬ್ಬರು ಡ್ರಗ್ ಸ್ಮಗ್ಲರ್‌ಗಳು ಅರೆಸ್ಟ್​...

ABOUT THE AUTHOR

...view details