ನವದೆಹಲಿ: 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಪ್ರಕರಣದಲ್ಲಿ ಗುವಾಹಟಿಯಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 1997ರ ಬ್ಯಾಚ್‌ನ ಭಾರತೀಯ ರೈಲ್ವೆ ಸೇವಾ ಅಧಿಕಾರಿ ಜಿತೇಂದರ್ ಪಾಲ್ ಸಿಂಗ್ ಅವರನ್ನು ಹರಿ ಓಂ ಹೆಸರಿನ ಮತ್ತೊಬ್ಬ ವ್ಯಕ್ತಿಯೊಂದಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮತ್ತು ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಆಹಾರ ನಿಗಮದ ಮೇಲೆ ಸಿಬಿಐ ದಾಳಿ: ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳ ಮೇಲೆ ಇತ್ತೀಚೆಗೆ ನಡೆದ ಸಿಬಿಐ ದಾಳಿಯ ಬಗ್ಗೆ ಮಾತನಾಡಿದ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ಹೇಳಿದ್ದಾರೆ. ಎಫ್‌ಸಿಐನ 59 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮಾತನಾಡಿರುವ ಅವರು ಭ್ರಷ್ಟ ಆಚರಣೆಗಳಲ್ಲಿ ತೊಡಗಿರುವ ಯಾರನ್ನೂ ರಕ್ಷಿಸಬೇಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರೀಯ ತನಿಖಾ ದಳವು ರೂಪ್ ನಗರ್, ಸಂಗ್ರೂರ್, ಮೊರಿಂಡಾ, ಬಸ್ಸಿ ಪಠಾನಾ ಫತೇಘರ್ ಸಾಹಿಬ್, ಮೊಹಾಲಿ, ಗುರುದಾಸ್‌ಪುರ್, ಬರ್ನಾಲಾ, ಮಾನ್ಸಾ, ಬಟಿಂಡಾ, ಸುನಮ್, ಬುಡ್ಲಾ ಸೇರಿದಂತೆ (ಎಲ್ಲವೂ ಪಂಜಾಬ್‌ನಲ್ಲಿ); ಅಂಬಾಲಾ, ಗುರುಗ್ರಾಮ್ (ಹರಿಯಾಣದಲ್ಲಿ); ಕೋಲಾರ, ಚಿಕ್ಕಬಳಾಪುರ (ಕರ್ನಾಟಕದಲ್ಲಿ); ಚೆನ್ನೈ (ತಮಿಳುನಾಡು), ನವದೆಹಲಿ, ಚಂಡೀಗಢ ಇತ್ಯಾದಿ ಸುಮಾರು 39 ಸ್ಥಳಗಳಲ್ಲಿ ನಡೆಸಿದ ಶೋಧದಲ್ಲಿ ಇದುವರೆಗೆ 1.03 ಕೋಟಿ ರೂ. ವಶಪಡಿಸಿಕೊಂಡಿದೆ.