ಶ್ರೀನಗರ : 62 ದಿನಗಳ ಕಾಲ ನಡೆದ ಅಮರನಾಥ ಯಾತ್ರೆ -2023 ಯ ಔಪಚಾರಿಕ ಅಂತ್ಯವನ್ನು ಸೂಚಿಸುವ ಕೊನೆಯ ಪೂಜೆಗಾಗಿ ಚಾರಿ ಮುಬಾರಕ್ (ಶಿವನ ಪವಿತ್ರ ಗದೆ) ಪಂಚತರಣಿಯನ್ನು ತಲುಪಿದ್ದು, ಗುರುವಾರ ಪವಿತ್ರ ಗುಹೆ ದೇವಾಲಯಕ್ಕೆ ತೆರಳಲಿದೆ. ಯಾತ್ರಿಗಳ ಕೊನೆಯ ತಂಡವು ಆಗಸ್ಟ್ 23 ರಂದು ಪವಿತ್ರ ಗುಹೆಗೆ ತೆರಳಿತ್ತು ಮತ್ತು ಅಂದಿನಿಂದ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ವರ್ಷ ಯಾತ್ರೆಯ ಆರಂಭದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಿದ್ದರು. ಆದರೆ ನಂತರದ ದಿನಗಳಲ್ಲಿ ಯಾತ್ರಿಗಳ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಹೀಗಾಗಿ ಅಧಿಕಾರಿಗಳು ಯಾತ್ರೆಯನ್ನು ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿಯೇ ಸ್ಥಗಿತಗೊಳಿಸಿದ್ದಾರೆ. ಈ ವರ್ಷ ಸುಮಾರು 4.5 ಲಕ್ಷ ಯಾತ್ರಿಕರು ಪವಿತ್ರ ಗುಹೆಗೆ ಭೇಟಿ ನೀಡಿದ್ದು, ಹಲವಾರು ವರ್ಷಗಳ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯ ಯಾತ್ರಿಗಳು ಇಲ್ಲಿಗೆ ಬಂದಿರುವುದು ವಿಶೇಷವಾಗಿದೆ.
ಕಳೆದ ಕೆಲ ವರ್ಷಗಳಿಂದ ಅಮರನಾಥ ಯಾತ್ರೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. 2012 ರಲ್ಲಿ ಭೇಟಿ ನೀಡಿದ 6 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಹೋಲಿಸಿದರೆ, ಈ ಸಂಖ್ಯೆ 2022 ರಲ್ಲಿ 3 ಲಕ್ಷ ಇತ್ತು ಮತ್ತು ಈ ವರ್ಷ 4.5 ಲಕ್ಷಕ್ಕೆ ಇಳಿದಿದೆ. 62 ದಿನಗಳ ಸುದೀರ್ಘ ತೀರ್ಥಯಾತ್ರೆ ಈ ವರ್ಷ ಜುಲೈ 1 ರಂದು ಪ್ರಾರಂಭವಾಗಿತ್ತು ಮತ್ತು ಆಗಸ್ಟ್ 31 ರಂದು 'ಚಾರಿ ಮುಬಾರಕ್' ಕಾರ್ಯಕ್ರಮದೊಂದಿಗೆ ಕೊನೆಗೊಳ್ಳಲಿದೆ.