ನವದೆಹಲಿ: 34 ಮಂದಿ ಬಾಲಕಿಯರು ಸೇರಿದಂತೆ 400 ಕ್ಕೂ ಹೆಚ್ಚು ಮಕ್ಕಳನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣದಿಂದ ರಕ್ಷಿಸಲಾಗಿದೆ ಎಂದು ಭಾನುವಾರ ಮಕ್ಕಳ ಕಲ್ಯಾಣ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಸಿಡಬ್ಲ್ಯುಸಿಯ ಮಯೂರ್ ವಿಹಾರ್ ಸಹಾಕಾರದೊಂದಿಗೆ ಉತ್ತರ ರೈಲ್ವೆ, ಸಾಥಿ, ಸಲಾಮ್ ಬಾಲಾಕ್ ಟ್ರಸ್ಟ್ ಮತ್ತು ಪ್ರಯಾಸ್ ಜೆಎಸಿ ಸೊಸೈಟಿ ಸಹಯೋಗದಲ್ಲಿ ಈ ರಕ್ಷಣಾ ಅಭಿಯಾನ ಆಯೋಜಿಸಲಾಗಿತ್ತು ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವರುಣ್ ಪಾಠಕ್ ತಿಳಿಸಿದ್ದಾರೆ.
402 ಮಕ್ಕಳಲ್ಲಿ 34 ಬಾಲಕಿಯರು ಮತ್ತು 372 ಬಾಲಕರು ಇದ್ದಾರೆ. ಈಗಾಗಲೇ ಎಲ್ಲರನ್ನು ರಕ್ಷಿಸುವ ಮೂಲಕ ಆರೈಕೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರುಪಡಿಸಲಾಗಿದೆ. ಸದ್ಯಕ್ಕೆ ಅವರನ್ನು ನಗರದ ಶಿಶುಪಾಲನಾ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ರಕ್ಷಿಸಲಾದ ಮಕ್ಕಳಲ್ಲಿ ಕಾಣೆಯಾದವರು, ಓಡಿ ಹೋದವರು ಮತ್ತು ಬಾಲ ಕಾರ್ಮಿಕರು ಸೇರಿದ್ದಾರೆ. ಈ ಕಾರ್ಯಚರಣೆಯಲ್ಲಿ ರೈಲ್ವೆ ಸಂರಕ್ಷಣಾ ಪಡೆ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರೂ ಸಹ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು, ಯುಪಿಯಲ್ಲಿ 20 ಮಕ್ಕಳ ರಕ್ಷಣೆ, 4ನೇ ಟಿ20 ಪಂದ್ಯ.... ಟಾಪ್ 10 ಸುದ್ದಿಗಳ ಕ್ವಿಕ್ಲುಕ್!
ಕಳೆದ ಫೆಬ್ರವರಿಯಲ್ಲಿ ನರ ಬಲಿಗಾಗಿ ಕಳ್ಳಸಾಗಣೆ ಮಾಡಲಾಗಿದ್ದ 16 ವರ್ಷದ ನೇಪಾಳದ ಬಾಲಕಿಯನ್ನು ಭಾರತದಲ್ಲಿ ರಕ್ಷಿಸಲಾಗಿತ್ತು. ಸಂತ್ರಸ್ತೆಯು ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಕರಣ ಸಂಬಂಧ ನೇಪಾಳದ ಮಾನವ ಕಳ್ಳಸಾಗಣೆ ವಿರೋಧಿ ದಳ ಐದು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.