ವಾರಾಣಸಿ(ಉತ್ತರ ಪ್ರದೇಶ): ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ನ ಎರಡನೇ ಅಲೆ ಸ್ವಲ್ಪ ಮಟ್ಟದಲ್ಲಿ ಕಡಿಮೆಯಾಗಿದೆ. ಇದರ ಮಧ್ಯೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ 23 ಮಕ್ಕಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಲ್ಲಿನ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹೆಚ್ಚಿನ ಕ್ರಮ ಕೈಗೊಂಡಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಾಂಕ್ರಾಮಿಕ ರೋಗ ಕೊರೊನಾ ಮೂರನೇ ಅಲೆ ಸಾಧ್ಯತೆಯಿಂದಾಗಿ ಮಕ್ಕಳನ್ನ ನಿರಂತರವಾಗಿ ಕೊರೊನಾ ಟೆಸ್ಟ್ಗೊಳಪಡಿಸಲಾಗುತ್ತಿದೆ. ಜೂನ್ 1ರಿಂದ ಪ್ರಾರಂಭವಾಗಿರುವ ಈ ಅಭಿಯಾನದಲ್ಲಿ ಇಲ್ಲಿಯವರೆಗೆ 10,831 ಮಕ್ಕಳನ್ನ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 23 ಮಕ್ಕಳಲ್ಲಿ ಕೊರೊನಾ ಸೋಂಕು ಇರುವುದು ದೃಢಗೊಂಡಿದೆ. ಎಲ್ಲ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಅದಕ್ಕಾಗಿ ವಿಶೇಷ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ.
ವಾರಾಣಸಿಯಲ್ಲಿ ಕೋವಿಡ್ ಮೂರನೇ ಅಲೆ ಆತಂಕ ಇದನ್ನೂ ಓದಿರಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಐವರ ಸ್ಥಿತಿ ಗಂಭೀರ
ಮಕ್ಕಳು ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದರ ಮಧ್ಯೆ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರುವುದು ವಾರಾಣಸಿಯಲ್ಲಿ ಮೂರನೇ ಅಲೆ ಆತಂಕ ಹುಟ್ಟಿಸಿದೆ. 23 ಮಕ್ಕಳ ಪೈಕಿ ಹುಟ್ಟಿನಿಂದ ಐದು ವರ್ಷದವರೆಗಿನ 4 ಮಕ್ಕಳು, 6ರಿಂದ 12 ವರ್ಷದ 8 ಮಕ್ಕಳು, 13ರಿಂದ 18 ವರ್ಷದ 11 ಮಕ್ಕಳು ಸೇರಿವೆ. ಸಾಂಕ್ರಾಮಿಕ ರೋಗದ ಬಗ್ಗೆ ಮಕ್ಕಳ ಕುಟುಂಬಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಹಾಲುಣಿಸುವ ತಾಯಂದಿರಿಗೆ ಸ್ತನ್ಯಪಾನ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂರನೇ ಅಲೆ ಕಾರಣದಿಂದಾಗಿ ಆರೋಗ್ಯ ಇಲಾಖೆ ಮೂರು ವಿಭಾಗ ರಚನೆ ಮಾಡಿದ್ದು, ಅದರಲ್ಲಿ ಮೊದಲನೇ ವಿಭಾಗ 5 ವರ್ಷದೊಳಗಿನ ಮಕ್ಕಳು, ಎರಡನೇ ವಿಭಾಗದಲ್ಲಿ 6 ರಿಂದ 12 ವರ್ಷ ಮತ್ತು ಮೂರನೇ ವಿಭಾಗದಲ್ಲಿ 13 ರಿಂದ 18 ವರ್ಷದ ಮಕ್ಕಳ ಪರೀಕ್ಷೆ ಮಾಡಲಾಗುತ್ತಿದೆ.