ನವದೆಹಲಿ: 90 ಡಿಗ್ರಿಗಳಷ್ಟು ತಿರುಗಿದ ಕುತ್ತಿಗೆಯೊಂದಿಗೆ ಪಾಕಿಸ್ತಾನದ ಈ ಬಾಲಕಿ 10 ವರ್ಷಗಳ ಕಾಲ ಹೇಗೆ ಬದುಕಿರಬಹುದು ಎಂದು ಒಂಚೂರು ಕಲ್ಪನೆ ಮಾಡಿಕೊಂಡು ನೋಡಿ.. ಅಬ್ಬಾ ಎನಿಸುತ್ತದೆ. ಆದರೆ, ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇರುತ್ತದೆಯಲ್ಲವೇ? ಹಾಗೆಯೇ ಇದಕ್ಕೂ ಒಂದು ಪರಿಹಾರ ಈಗ ಸಿಕ್ಕಿದ್ದು, ಭಾರತದ ವೈದ್ಯರು ಈಕೆಯ ಕತ್ತನ್ನು ಮತ್ತೆ ಮೊದಲಿನ ರೀತಿ ಮಾಡುವಲ್ಲಿ ಸಫಲರಾಗಿದ್ದಾರೆ.
ಈಕೆ ಅಫ್ಶೀನ್. 12 ವರ್ಷ ವಯಸ್ಸು. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ. ಈಕೆಗೆ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ್ದು, ಹೊಸ ಜೀವನ ನೀಡಿದ್ದಾರೆ. ಹಿರಿಯ ವೈದ್ಯ ಡಾ. ರಾಜಗೋಪಾಲನ್ ಕೃಷ್ಣನ್ ಈಕೆಗೆ 4 ಅತ್ಯಂತ ಸಂಕೀರ್ಣ ಶಸ್ತ್ರ ಚಿಕಿತ್ಸೆ ಮಾಡಿ, ಆಕೆ ಮತ್ತೆ ಸಹಜ ಜೀವನಕ್ಕೆ ಮರಳುವಂತೆ ಮಾಡಿದ್ದಾರೆ.
ಅಪಘಾತದಿಂದಾದ ಸಮಸ್ಯೆ : ಅಫ್ಶೀನ್ 10 ವರ್ಷದ ಬಾಲಕಿಯಾಗಿದ್ದಾಗ ಅಪಘಾತವೊಂದರಲ್ಲಿ ಕತ್ತು 90 ಡಿಗ್ರಿಗಳಷ್ಟು ತಿರುಗಿಕೊಂಡಿತ್ತು. ದಿನನಿತ್ಯದ ಎಲ್ಲ ಕೆಲಸಗಳಿಗೂ ಬಾಲಕಿ ಪರದಾಡುತ್ತಿದ್ದಳು. ಪಾಲಕರು ಬಾಲಕಿಯನ್ನು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು. ಆದರೆ ಸಮಸ್ಯೆ ಪರಿಹಾರವಾಗುವ ಬದಲು ಮತ್ತಷ್ಟು ಹೆಚ್ಚಾಗಿತ್ತು.
ಈ ಅಸಾಮಾನ್ಯ ಸ್ಥಿತಿಯಿಂದಾಗಿ ಆಕೆಗೆ ಶಾಲೆಗೆ ಹೋಗಲಾಗಲಿಲ್ಲ. ತನ್ನ ವಯಸ್ಸಿನ ಮಕ್ಕಳೊಂದಿಗೆ ಆಟವಾಡಲು ಸಹ ಸಾಧ್ಯವಾಗಲಿಲ್ಲ. ಆಕೆಯ ಜೀವನ ದುಃಖದಿಂದ ತುಂಬಿತ್ತು. ಆದರೆ, ಸಮಯ ಕಳೆದಂತೆ ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಏತನ್ಮಧ್ಯೆ ಈಕೆಗೆ ಸೆರೆಬ್ರಲ್ ಪಾಲ್ಸಿಯಂಥ ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿತು. ಎರಡು ಕ್ಲಿಷ್ಟಕರವಾದ ವೈದ್ಯಕೀಯ ಪರಿಸ್ಥಿತಿಗಳ ಮಧ್ಯೆ ಆಕೆಗೆ ಶಾಲಾಭ್ಯಾಸ ದೂರವೇ ಉಳಿಯಿತು. ಹೀಗೇಯೇ ಬಾಲಕಿ 12 ವರ್ಷ ಕಳೆದಿದ್ದಳು.
ಎದುರಾದ ಎರಡು ಸಮಸ್ಯೆ: ಈ ಮಧ್ಯೆ, ಅವಳಿಗೆ ಹೊಸ ಜೀವನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಘಟನೆಯೊಂದು ನಡೆಯಿತು. ಆಕೆಯ ತಾಯಿ ಬಾಲಕಿಯನ್ನು ತಪಾಸಣೆಗಾಗಿ ವೈದ್ಯಕೀಯ ಶಿಬಿರವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯ ವಿಚಿತ್ರ ಕುತ್ತಿಗೆ ಜನರ ಗಮನ ಸೆಳೆದಿತ್ತು. ಈ ಮಾಹಿತಿಯು ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನಿ ನಟ ಅಹ್ಸನ್ ಖಾನ್ ಅವರನ್ನು ತಲುಪಿದಾಗ, ಅವರು ಬಾಲಕಿಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ, "ಅಫ್ಶೀನ್ಗೆ ನಮ್ಮ ಸಹಾಯ ಬೇಕು" ಎಂದು ಬರೆದಿದ್ದರು.
ಸಹಾಯ ಮಾಡಿದ ಪೋಸ್ಟ್:ಈ ವೈರಲ್ ಚಿತ್ರವನ್ನು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಪೋಸ್ಟ್ ಮಾಡಲಾಗಿತ್ತು ಹಾಗೂ ಈ ಚಿತ್ರ ಡಾ. ರಾಜಗೋಪಾಲನ್ ಕೃಷ್ಣನ್ ಗಮನಕ್ಕೆ ಬಂದಿತ್ತು. ಆಗ ಅವರು ಬಾಲಕಿಗೆ ಉಚಿತವಾಗಿ ಚಿಕಿತ್ಸೆ ನೀಡಲು ನಿರ್ಧರಿಸಿ, ಬಾಲಕಿಯ ತಂದೆಯನ್ನು ಸಂಪರ್ಕಿಸಿ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಕರೆಸಿದರು.