ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸುಮಾರು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜಿಸಿದ್ದು, ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಎಐಎಂಐಎಂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಒಸ್ಮಾನ್ ಘನಿ ಹೇಳಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ಸಮಾಜವನ್ನು ತುಳಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ: ಹೆಚ್ ಡಿ ರೇವಣ್ಣ
''ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷವು ಮಾತುಕತೆ ನಡೆಸುತ್ತಿದೆ. ಆದರೆ, ಈ ಪ್ರಸ್ತಾಪಕ್ಕೆ ಆ ಪಕ್ಷ ಇನ್ನೂ ಪ್ರತಿಕ್ರಿಯಿಸಿಲ್ಲ. ರಾಜ್ಯದಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ'' ಎಂದು ಒಸ್ಮಾನ್ ಘನಿ ತಿಳಿಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವ ಮಾತುಗಳನ್ನು ಪಕ್ಷದ ಮುಖ್ಯಸ್ಥ ಓವೈಸಿ ಸಹ ಆಡಿದ್ದಾರೆ. ''ಈಗಾಗಲೇ ನಾವು ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಮೈತ್ರಿಗೆ ನಾವು ಮುಕ್ತವಾಗಿದ್ದೇವೆ. ಅಲ್ಲದೇ, ನಾವು ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ'' ಎಂದು ಅವರು ಹೇಳಿದರು.
ಮುಸ್ಲಿಮರ ಮೀಸಲಾತಿ ರದ್ದು ಕಾನೂನುಬಾಹಿರ - ಓವೈಸಿ:ಮುಂದುವರೆದು, ''ಕಾಂಗ್ರೆಸ್ ಮೈತ್ರಿ ಜೊತೆ ಮಾಡಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ, ಕಾಂಗ್ರೆಸ್ನವರು ನನ್ನ ವಿರುದ್ಧ ಆಧಾರರಹಿತ ಮತ್ತು ಕಡು ಆರೋಪಗಳನ್ನು ಮಾಡುತ್ತಾರೆ. ಆದ್ದರಿಂದ ನಾವು ಕಾದು ನೋಡುತ್ತೇವೆ'' ಎಂದು ಓವೈಸಿ ಹೇಳಿದರು. ಇದೇ ವೇಳೆ, ''ಒಬಿಸಿ ವರ್ಗದೊಳಗೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಬಸವರಾಜ ಬೊಮ್ಮಾಯಿ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಖಂಡಿಸಿದ ಓವೈಸಿ, ಇದು ಸಂಪೂರ್ಣ ಕಾನೂನುಬಾಹಿರವಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.