ದಾವಣಗೆರೆ/ವಿಜಯನಗರ: ಹರಪನಹಳ್ಳಿ ವಿಧಾನಸಭಾ ಮತಕ್ಷೇತ್ರವು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದು ದಾವಣಗೆರೆ ಜಿಲ್ಲೆಗೆ ಒಳಪಟ್ಟಿತ್ತು. ಕೆಲವು ದಿನಗಳ ಬಳಿಕ ಬಳ್ಳಾರಿ ಜಿಲ್ಲೆಗೆ ಸ್ಥಳಾಂತರಗೊಂಡಿತು. ಇತ್ತೀಚಿಗೆ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಸೇರಿತು. ಈ ಪ್ರಹಸನವೆಲ್ಲ ನಡೆದಿದ್ದು ಕೇವಲ ಒಂದೇ ವರ್ಷದಲ್ಲಿ ಅನ್ನೋದು ವಿಪರ್ಯಾಸ. ಇದರಿಂದ ಕ್ಷೇತ್ರದ ಜನರು ಹೈರಾಣಾಗಿದ್ದು ಯಾರೂ ಕೂಡ ತಳ್ಳಿಹಾಕುವಂತಿಲ್ಲ.
ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ವಲಸಿಗರ ಪಾರುಪಾತ್ಯವೇ ಹೆಚ್ಚು. ಈ ಕ್ಷೇತ್ರಕ್ಕೆ ಬಳ್ಳಾರಿಯಿಂದ ಕರುಣಾಕರ ರೆಡ್ಡಿ ಹಾಗೂ ಎಂಪಿ ಪ್ರಕಾಶ್ ಪುತ್ರ ಎಂಪಿ ರವೀಂದ್ರ ವಲಸೆ ಬಂದು ಗೆದ್ದಿದ್ದು ಇತಿಹಾಸ. ಆದರೆ, ಸತತವಾಗಿ 2 ಬಾರಿ ಗೆಲುವು ಸಾಧಿಸಿರುವ ಕರುಣಾಕರ ರೆಡ್ಡಿಗೆ ಈ ಸಲ ಕಾಂಗ್ರೆಸ್ನಿಂದ ಎಂಪಿ ಪ್ರಕಾಶ್ ಪುತ್ರಿಯರಿಬ್ಬರು ಟಫ್ ಫೈಟ್ ನೀಡಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿದೆ.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ವಿಜಯನಗರ ಜಿಲ್ಲೆಗೆ ಸೇರಿಕೊಂಡಿದ್ದರೂ ಸದ್ಯ ದಾವಣಗೆರೆ ಲೋಕಾಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೊದಲು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ಎಂಪಿ ರವೀಂದ್ರ, ಸಿದ್ದರಾಮಯ್ಯ (ಮುಖ್ಯಮಂತ್ರಿಯಾಗಿದ್ದಾಗ) ಅವರ ಮೇಲೆ ಒತ್ತಡ ತಂದು ಬಳ್ಳಾರಿ ಜಿಲ್ಲೆಗೆ ಸೇರಿಸಿದ್ದರು. ಹಿಂದುಳಿದ ಕ್ಷೇತ್ರವಾಗಿದ್ದರಿಂದ ಜೊತೆಗೆ ಹೈದರಬಾದ್ ಕರ್ನಾಟಕ 371ಜೆ ಕಲಾಂಗೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು. ಆದರೆ, ಕೆಲವು ದಿನಗಳ ಬಳಿಕ ಮಧ್ಯೆ ಬಳ್ಳಾರಿ ಇಬ್ಭಾಗವಾಗುವ ಮೂಲಕ ಹರಪನಹಳ್ಳಿಯನ್ನು ಮತ್ತೆ ವಿಜಯನಗರ ಜಿಲ್ಲೆಗೆ ಸೇರಿಸಲಾಯಿತು. ಹೀಗೇ ಪದೆ ಪದೇ ಜಿಲ್ಲೆ ಬದಲಾವಣೆ ಆಗಿದ್ದರಿಂದ ಜನರು ಹೈರಾಣಾಗಿದ್ದು ಸದ್ಯದ ಮಾತು.
ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಣಾಹಣಿ ಇದೆ. ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಸಹ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿವೆ. ಎಂಪಿ ಪ್ರಕಾಶ್ ಕುಟುಂಬ ಹಾಗೂ ರೆಡ್ಡಿ ಕುಟುಂಬ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತ. ಅವರ ಮುಂದುವರೆದ ಭಾಗವಾಗಿ ಎಂಪಿ ಪ್ರಕಾಶ್ ಪುತ್ರಿಯರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.
ಚುನಾವಣೆಗಳ ಇತಿಹಾಸ:2008ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂಪಿ ಪ್ರಕಾಶ್ ಸೋಲುಂಡಿದ್ದರು. ಆಗ ಈ ಕ್ಷೇತ್ರ ಬಿಜೆಪಿ ವಶವಾಗಿತ್ತು. ಬಿಜೆಪಿ ಅಭ್ಯರ್ಥಿ ಜಿ ಕರುಣಾಕರ ರೆಡ್ಡಿ 69235 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂಪಿ ಪ್ರಕಾಶ್ ವಿರುದ್ಧ ಜಯಗಳಿಸಿದ್ದರು. ಎಂಪಿ ಪ್ರಕಾಶ್ 44017 ಮತಗಳನ್ನು ಪಡೆದು ಸೋಲುಂಡಿದ್ದರು. ಜೆಡಿಎಸ್ ಹೀನಾಯ ಸೋಲು ಕಂಡಿತ್ತು.