ಬೆಂಗಳೂರು: ವಾಟರ್ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಬಳಿ ನಡೆದಿದೆ. ಇಶಾನ್ (23) ಮೃತ ದುರ್ದೈವಿ.
ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಇಶಾನ್, ಮಾನ್ಯತಾ ಟೆಕ್ ಪಾರ್ಕ್ ಬಳಿ ಕುಟುಂಬದೊಂದಿಗೆ ವಾಸವಿದ್ದ ಗುರುವಾರ ಸಂಜೆ ಸ್ನೇಹಿತನನ್ನು ಭೇಟಿಯಾಗಲು ಥಣಿಸಂದ್ರ ಬಳಿ ಬಂದಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಶಾನ್ಗೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ವಾಹನ ಡಿಕ್ಕಿಯಾಗಿದೆ. ಕೆಳಕ್ಕೆ ಬಿದ್ದ ಇಶಾನ್, ಚಕ್ರಕ್ಕೆ ಸಿಲುಕಿಕೊಂಡಿದ್ದು, ಗಮನಿಸದ ಟ್ಯಾಂಕರ್ ಚಾಲಕ ಮುಂದೆ ಸಾಗಿದ್ದಾನೆ.
ಗಮನಿಸಿದ ಇತರ ವಾಹನ ಸವಾರರು ಟ್ಯಾಂಕರ್ ತಡೆದು ನಿಲ್ಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಇಶಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ಯಾಂಕರ್ ಸವಾರನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ; ರೈತರಿಬ್ಬರಿಗೆ ಗಾಯ, ಎರಡು ಎತ್ತುಗಳು ಸಾವು - Hubballi Bus Accident