ಹಾಸನ: ವಿದ್ಯುತ್ ಸ್ಪರ್ಶದಿಂದ 3 ಕರಡಿಗಳು ಮೃತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾಗರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಹೆಚ್ಚಾಗಿದ್ದು, ಈ ಭಾಗ ಅವುಗಳ ಆವಾಸಸ್ಥಾನವಾಗಿದೆ. ಕಳೆದ ಆರು ತಿಂಗಳಲ್ಲಿ ಸುಮಾರು ಐದಾರು ಮಂದಿಗೆ ದಾಳಿ ಮಾಡಿ ಗಾಯಗೊಳಿದ್ದವು. ಇದರ ಬೆನ್ನಲ್ಲಿಯೇ ಕರಡಿಗಳನ್ನು ಹಿಡಿಯುವ ಮೂಲಕ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು. ಆದರೆ, ದುರಾದೃಷ್ಟವಶಾತ್ ಅರಣ್ಯ ಪ್ರದೇಶದ ಬಳಿ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತುಳಿದ ಹಿನ್ನೆಲೆ ತಾಯಿ ಮತ್ತು ಮರಿ ಕರಡಿಯ ಜೊತೆ ಗಂಡು ಕರಡಿ ಸಾವಿಗೀಡಾಗಿವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿಗಳು ಇತ್ತೀಚಿನ ದಿನಗಳಲ್ಲಿ ಆಹಾರದ ಕೊರತೆಯಿಂದ, ಕಾಡಿನಿಂದ ನಾಡಿಗೆ ದಾಳಿ ಇಡುತ್ತಿವೆ. ಜಿಲ್ಲೆಯಲ್ಲಿಯೂ ಚಿರತೆ, ಆನೆ, ಕರಡಿ ಹಾವಳಿಗಳು ಹೆಚ್ಚಾಗುತ್ತಿವೆ. ಅರಣ್ಯ ಇಲಾಖೆಯವರು, ಅವುಗಳಿಗೆಬೇಕಾದ ಆಹಾರದ ಗಿಡಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪ್ರಾಣಿ ಸಂಕುಲ ರಕ್ಷಿಸಬೇಕಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.