ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಹಣ ಕದ್ದು ಪರಾರಿಯಾಗಿದ್ದ ಸೆಕ್ಯುರಿಟಿ ಗಾರ್ಡ್‌ವೋರ್ವನನ್ನು ನಗರದ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ನಾರಾಯಣಸ್ವಾಮಿ (33) ಬಂಧಿತ ಆರೋಪಿ. ಈತನಿಂದ ಕಾರು, ಚಿನ್ನಾಭರಣ ಹಾಗು 3.50 ಲಕ್ಷ ರೂ ನಗದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಯನಗರದ ಆಡಿಟ್ ಕಚೇರಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಹಾಗೂ ಚಾಲಕನಾಗಿ ನಾರಾಯಣಸ್ವಾಮಿ ಕೆಲಸ ಮಾಡಿಕೊಂಡಿದ್ದ. ಕಚೇರಿಯ ಮಾಲೀಕರು, ಇತರೆ ಸಿಬ್ಬಂದಿಯ ಚಲನವಲನಗಳ ಕುರಿತು ತಿಳಿದುಕೊಂಡಿದ್ದ ಈತ, ಸೆ. 22ರಂದು ಕ್ಯಾಬಿನ್‌ನ ಡ್ರಾಯರ್‌ನಲ್ಲಿಟ್ಟಿದ್ದ 10.95 ಲಕ್ಷ ರೂ. ಕದ್ದು ಪರಾರಿಯಾಗಿದ್ದ.
ಹಣ ಕಳವಾಗಿರುವ ಕುರಿತು ಕಚೇರಿಯ ಸಿಸಿಟಿವಿ ದೃಶ್ಯಗಳ ಸಮೇತ ಮಾಲೀಕರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಸ್ತೂರಿ ನಗರದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಕದ್ದ ಹಣದಲ್ಲಿ ಆರೋಪಿ ಸೆಕೆಂಡ್ ಹ್ಯಾಂಡ್ ಕಾರು, ಬಟ್ಟೆ, ಚಿನ್ನಾಭರಣ ಖರೀದಿಸಿದ್ದ. ಕಾರು ಶೋರೂಂ ಮಾಲೀಕ ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.