ಚಿಕ್ಕಮಗಳೂರು : ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಮನೆಗೆ ಬಂದು ಊಟ ಮಾಡಿ, ಮಲಗಿದ್ದ ವ್ಯಕ್ತಿ ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗಂಗಪ್ಪ (48) ಎಂದು ಗುರುತಿಸಲಾಗಿದೆ.
ಮೃತ ಗಂಗಪ್ಪ ಭಾನುವಾರ ಸಂಜೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಎರಡು ಬಾರಿ ಹಾವು ಕಚ್ಚಿದೆ. ಹಾವು ಕಡಿದದ್ದು ಅವರ ಗಮನಕ್ಕೆ ಬಂದಿರಲಿಲ್ಲ. ಯಾವುದೋ ಮುಳ್ಳು ಚುಚ್ಚಿರಬೇಕು, ಏನೂ ಆಗಲ್ಲ ಎಂದು ಮನೆಗೆ ಬಂದು ಊಟ ಮಾಡಿ ಮಲಗಿದ್ದರು.
ಸೋಮವಾರ ಬೆಳಗಿನ ಜಾವ ಎದೆ ಉರಿ ಹಾಗೂ ಸುಸ್ತು ಎಂದು ಮನೆಯಲ್ಲಿ ಕೂಗಾಡಿದ್ದಾರೆ. ಮನೆಯವರು ಎದ್ದು ನೀರು ಕುಡಿಸಿ ಆಸ್ಪತ್ರೆಗೆ ಹೋಗಲು ಹೊರಡುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಬಾಯಿಯಲ್ಲಿ ನೊರೆ ಬಂದಿದ್ದರಿಂದ ಮನೆಯವರಿಗೆ ಹಾವು ಕಡಿದಿದೆ ಎಂಬುದು ತಿಳಿದಿದೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೊಡ್ಡಬಳ್ಳಾಪುರ: ಹಾವು ಕಡಿತದಿಂದ 7 ವರ್ಷದ ಬಾಲಕಿ ಸಾವು - Snake Bite