ಶಿವಮೊಗ್ಗ: ಊಟ ಬಡಿಸಲು ನಿರಾಕರಿಸಿದ ಪತ್ನಿಯ ಕತ್ತನ್ನು ಟವಲ್ನಲ್ಲಿ ಬಿಗಿದು ಗಂಡ ಕೊಂದಿರುವ ಘಟನೆ ಶಿಕಾರಿಪುರದ ಅಂಬ್ಲಿಗೊಳ ಗ್ರಾಮದಲ್ಲಿ ನಡೆದಿದೆ. ಅಂಬ್ಲಿಗೊಳ ಗ್ರಾಮದ ಮನು (35) ತನ್ನ ಹೆಂಡತಿ ಗೌರಮ್ಮ(28) ಎಂಬವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೌರಮ್ಮ ಶಿಕಾರಿಪುರದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಮನು ಮನೆಗೆ ಬಂದಾಗ ಪತ್ನಿ ಗೌರಮ್ಮನಿಗೆ ಊಟ ಬಡಿಸುವಂತೆ ಹೇಳಿದ್ದರು. ಈ ವೇಳೆ ಫೋನ್ನಲ್ಲಿ ಮಾತನಾಡುತ್ತಿದ್ದ ಗೌರಮ್ಮ ನೀನೇ ಊಟ ಬಡಿಸಿಕೊಂಡು ತಿನ್ನುವಂತೆ ಹೇಳಿದ್ದರು. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ, ಮನು ತನ್ನ ಬಳಿ ಇದ್ದ ಟವಲ್ನಿಂದ ಪತ್ನಿಯ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರು ಹೊರಗೆ ಆಟವಾಡುತ್ತಿದ್ದರು. ಶಿಕಾರಿಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಮನುವನ್ನು ವಶಕ್ಕೆ ಪಡೆದುಕೊಂಡು, ಕೇಸು ದಾಖಲಿಸಿಕೊಂಡಿದ್ದಾರೆ.