ಹುಬ್ಬಳ್ಳಿ: ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದ್ದು, ಈ ಬಗ್ಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು 24 ಗಂಟೆಗಳ ಗಡುವು ನೀಡಿದೆ. ಜಾನುವಾರುಗಳ ವಾರಸುದಾರರಿಗೆ ಬಿಸಿಮುಟ್ಟಿಸಲು ಪಾಲಿಕೆ ಮುಂದಾಗಿದೆ.
ಇತ್ತೀಚೆಗೆ ನಗರದ ರಸ್ತೆಗಳು, ವೃತ್ತಗಳು, ಆಟದ ಮೈದಾನ, ಮಾರುಕಟ್ಟೆ, ಉದ್ಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದನ, ಎಮ್ಮೆ, ಕರು ಹಾಗೂ ಹಂದಿಗಳನ್ನು ಹೆಚ್ಚಾಗಿ ಬಿಡಲಾಗುತ್ತಿದೆ. ಜಾನುವಾರುಗಳಿಂದ ಪಾದಚಾರಿಗಳು, ಮಕ್ಕಳು, ವೃದ್ಧರು, ವಾಹನ ಚಾಲಕರು ಮತ್ತು ವ್ಯಾಪಾರಸ್ಥರಿಗೆ ಈಗಾಗಲೇ ಸಾಕಷ್ಟು ಅನಾಹುತಗಳಾಗಿದೆ. ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿದ್ದು, ಜೊತೆಗೆ ಹೊಲಗಳಿಗೆ ನುಗ್ಗಿ ಬೆಳೆಗಳನ್ನೂ ಹಾನಿ ಮಾಡುತ್ತಿವೆ.
ಈ ಕುರಿತು ಮಹಾನಗರ ಪಾಲಿಕೆಯ ಸಹಾಯವಾಣಿಗೆ ಸಾಕಷ್ಟು ದೂರುಗಳು ಬಂದಿದ್ದು, ತಮ್ಮ ಜಾನುವಾರುಗಳನ್ನು 24 ಗಂಟೆಗಳೊಳಗೆ ಸುಪರ್ದಿಗೆ ತೆಗೆದುಕೊಂಡು ಸಾಕಬೇಕು. ತಪ್ಪಿದಲ್ಲಿ ರಸ್ತೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿರುವ ಜಾನುವಾರುಗಳನ್ನು ಬಿಡಾಡಿ ಪ್ರಾಣಿಗಳೆಂದು ಪರಿಗಣಿಸಿ, ಹಿಡಿದು ವಿವಿಧ ಗೋಶಾಲೆಗಳಿಗೆ ಬಿಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಮುಖ್ಯ ಪಶು ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.