ರಾಮನಗರ: ಹೆಚ್ಚುವರಿ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲು ಲಂಚ ಪಡೆಯುತ್ತಿದ್ದ ಆರೋಪ ಸಂಬಂಧ ಬಿಡದಿಯ ಬೆಸ್ಕಾಂ ಉಪ ವಿಭಾಗದ ಎಇಇಗೆ ರಾಮನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಎನ್. ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಹೆಚ್ಚುವರಿ ವಿದ್ಯುತ್ ಮಂಜೂರಾತಿಗಾಗಿ ಬಿಡದಿಯ ಮಂಚೇಗೌಡ ಪಾಳ್ಯದ ಓರಿಯಂಟಲ್ ಕ್ವಾರಿಸ್ ಅಂಡ್ ಮೈನ್ಸ್ ಪ್ರೈವೇಟ್ ಲಿಮಿಟೆಡ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಇವರ ಮೇಲಿದೆ.
ಸೆ.18ರಂದು ಎಇಇ ಪುಟ್ಟಸ್ವಾಮಿ 30,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದರು. ಬಳಿಕ ರಾಮನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಅಧಿಕಾರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹ ಪಿ.ವಿ. ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಗೌತಮ್ ಎಂ.ಆರ್. ಹಾಗೂ ಸುಧೀರ್ ಎಸ್. ನೇತೃತ್ವದ ತಂಡ ದಾಳಿ ನಡೆಸಿತ್ತು.