ವಿಶ್ವ ಪರಿಸರ ದಿನ: ಕೆರೆ ಪರಿಸರ ಹಾಳು ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ - WORLD ENVIRONMENT DAY - WORLD ENVIRONMENT DAY

🎬 Watch Now: Feature Video

thumbnail

By ETV Bharat Karnataka Team

Published : Jun 5, 2024, 7:29 PM IST

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳು ಕಲುಷಿತಗೊಂಡಿರುವುದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯತ್​ ಸದಸ್ಯೆ ಚೈತ್ರಾ ಮಾತನಾಡಿ, "ಶುದ್ಧ ನೀರಿಗಾಗಿ ಕಳೆದ ಮೂರು ವರ್ಷಗಳಿಂದ ಮಕ್ಕಳು ಸೇರಿದಂತೆ ಹಿರಿಯರೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ಪ್ರತಿಭಟನೆ ವೇಳೆ ಅಧಿಕಾರಿಗಳು ಕೊಟ್ಟ ಅಶ್ವಾಸನೆ ಈಡೇರಿಲ್ಲ. ರಾಸಾಯನಿಕ ನೀರು ಕೆರೆಗೆ ಸೇರಿ ಜಾನುವಾರುಗಳು ಸಾವನ್ನಪ್ಪಿವೆ. ಈ ನೀರು ಸೇವಿಸಿ ಕೆಲವರು ಕ್ಯಾನ್ಸರ್ ರೋಗಕ್ಕೂ ಬಲಿಯಾಗಿದ್ದಾರೆ. 3ನೇ ಹಂತದ ಶುದ್ಧೀಕರಣ ಘಟಕ ಸ್ಫಾಪನೆಯೊಂದೇ ಇದಕ್ಕೆ ಪರಿಹಾರ" ಎಂದರು.

ಗ್ರಾಮಸ್ಥೆ ಗಾಯಿತ್ರಿ ಮಾತನಾಡಿ, "ದೊಡ್ಡಬಳ್ಳಾಪುರ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ತ್ಯಾಜ್ಯ ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ನಮ್ಮೂರಿನ ಕೆರೆ ಸೇರುತ್ತಿದೆ. ಇದರಿಂದ ನಮ್ಮೂರ ಕೆರೆಯ ಪರಿಸರ ಹಾಳಾಗಿದೆ. ಶುದ್ಧನೀರು ಸಿಗುತ್ತಿಲ್ಲ, ಭವಿಷ್ಯದಲ್ಲಿ ನಮ್ಮ ಮಕ್ಕಳು ಈ ಕಲುಷಿತ ಪರಿಸರದಲ್ಲಿ ಬದುಕಲು ಸಾಧ್ಯವೇ ಎಂಬ ಆತಂಕ ಕಾಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಲ್ಲಿ ನಾವು 3ನೇ ಹಂತದ ಶುದ್ಧೀಕರಣ ಘಟಕ ಸ್ಫಾಪಿಸುವಂತೆ ಮನವಿ ಮಾಡುತ್ತೇವೆ" ಎಂದರು.

ರೈತ ಮುಖಂಡ ಸತೀಶ್ ಮಾತನಾಡಿ, "ವಿಶ್ವಮಟ್ಟದಲ್ಲಿ ಪರಿಸರ ದಿನ ಆಚರಿಸಲಾಗುತ್ತಿದೆ. ಆದರೆ ನಮ್ಮೂರಿನ ಜನರು ಪರಿಸರ ದಿನ ಆಚರಿಸುವ ಸ್ಥಿತಿಯಲ್ಲಿ ಇಲ್ಲ. ಅರ್ಕಾವತಿ ನದಿ ಪಾತ್ರದಲ್ಲಿ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆ ಕಲುಷಿತಗೊಂಡಿದೆ. ಆದರೆ ಇವತ್ತು ಅರ್ಕಾವತಿ ನದಿ ಪಾತ್ರದಲ್ಲಿನ ಕೆರೆಗಳ ಪರಿಸರವನ್ನು ಹಾಳು ಮಾಡಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಅರ್ಕಾವತಿ ನದಿ ಹೋರಾಟ ಸಮತಿ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: ವಿಶ್ವ ಪರಿಸರ ದಿನ: ಭೂಮಿ ಕಾಪಾಡಲು ಕೈಗೊಳ್ಳಬೇಕಿದೆ ಪ್ರತಿಯೊಬ್ಬರು ಪಣ - WORLD ENVIRONMENT DAY

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.