ಔರಂಗಾಬಾದ್ (ಮಹಾರಾಷ್ಟ್ರ): ಪ್ರಸ್ತುತ, ದೇಶದ ಮಾರುಕಟ್ಟೆಯಲ್ಲಿ ಇ-ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಮನಗಂಡ ಯುವಕನೊಬ್ಬ ಹಳೆಯ ಸ್ಕ್ರ್ಯಾಪ್ ವಾಹನಗಳನ್ನು ಇ-ವಾಹನಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾನೆ. ಹೌದು, ಛತ್ರಪತಿ ಸಂಭಾಜಿನಗರದ ಯುವಕ ಡ್ಯಾನಿಶ್ ಚಾವ್ಡಾ, ಪ್ರಾಯೋಗಿಕವಾಗಿ ಕೆಲವು ಇ-ವಾಹನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಸರ್ಕಾರದ ಅನುಮತಿಯನ್ನು ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಇಂಧನವನ್ನು ಉಳಿಸಲು ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇ-ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ವಿವಿಧ ಕಂಪನಿಗಳು ತಯಾರು ಮಾಡಿರುವ ಇ- ವಾಹನಗಳ ದರ ತುಂಬಾ ದುಬಾರಿಯಾಗಿದೆ. ಹೀಗಾಗಿ, ತಮ್ಮ ಮನೆಗಳಲ್ಲಿರುವ ಹಳೆ ವಾಹನಗಳನ್ನೇ ಇ-ವಾಹನವನ್ನಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದ್ದು, ಇದರಿಂದ ಹೆಚ್ಚು ಹಣ ವ್ಯಯಿಸದೆ ಹಳೆಯ ವಾಹನವನ್ನು ಇ-ವಾಹನವನ್ನಾಗಿ ಪರಿವರ್ತಿಸಿಕೊಂಡು ಬಳಸಬಹುದು ಎಂದು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಡ್ಯಾನಿಶ್ ಚಾವ್ಡಾ ಹೇಳಿದರು.
ಇಂಧನ ಚಾಲಿತ ವಾಹನಗಳ ಜೀವಿತಾವಧಿಯನ್ನು ಸರ್ಕಾರ 15 ವರ್ಷಗಳಿಗೆ ನಿಗದಿಪಡಿಸಿದೆ. ಎಂಜಿನ್ ಹಾನಿಕಾರಕ ಹೊಗೆಯನ್ನು ಹೆಚ್ಚು ಹೊರಸೂಸುತ್ತದೆಯೇ ಎಂದು ಪರಿಶೀಲಿಸಿದ ಬಳಿಕ ಅವುಗಳನ್ನು ಮತ್ತೆ ಹೊಸದಾಗಿ ನೋಂದಾಯಿಸಲಾಗುತ್ತದೆ. ಆದರೆ ವಾಹನ ಹಳೆಯದಾಗುತ್ತಿದ್ದಂತೆ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಮತ್ತೊಂದೆಡೆ, ವಾಹನವು ಹಳೆಯದಾಗುವುದು ಮತ್ತು ಅದರ ಬಿಡಿಭಾಗಗಳು ಲಭ್ಯವಾಗದ ಕಾರಣ, ಜನರು ಹೊಸ ವಾಹನ ಖರೀದಿಸಲು ಮುಂದಾಗುತ್ತಾರೆ. ಪ್ರಸ್ತುತ ಇ - ವಾಹನಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಹಳೆ ವಾಹನಗಳನ್ನೇ ಇ - ವಾಹನಗಳನ್ನಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನ ಉಪಯುಕ್ತವಾಗಲಿದೆ ಎಂದರು.
ಹಳೆಯ ವಾಹನಗಳನ್ನು ಇ-ವಾಹನಗಳಾಗಿ ಪರಿವರ್ತಿಸುವಾಗ, ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ವಾಹನದ ಇಂಧನ ಎಂಜಿನ್ ಅನ್ನು ತೆಗೆದುಹಾಕಲಾಗುತ್ತದೆ. ನಂತರ ಅಲ್ಲಿ ಮೋಟಾರ್ ಮತ್ತು ಬ್ಯಾಟರಿ ಹೊಂದಿಕೊಳ್ಳಲು, ವೆಲ್ಡಿಂಗ್ ಸಹಾಯದಿಂದ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಅದರ ನಂತರ, ಮೋಟಾರ್ ಮತ್ತು ಬ್ಯಾಟರಿಯನ್ನು ಅಳವಡಿಸಿ ಹಳೆ ವಾಹನವನ್ನು ಇ-ವಾಹನಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.
ಕಡಿಮೆ ವೆಚ್ಚದಲ್ಲಿ ಇ -ವಾಹನವಾಗಿ ಪರಿವರ್ತನೆ: ಈ ಬದಲಾವಣೆ ಮಾಡಲು ಮೊಪೆಡ್‌ಗೆ 40 ಸಾವಿರ ಮತ್ತು ಬೈಕ್‌ಗೆ 45 ರಿಂದ 50 ಸಾವಿರ ರೂ. ಖರ್ಚಾಗುತ್ತದೆ. ಹಳೆ ವಾಹನವನ್ನು ಇ ವಾಹನವನ್ನಾಗಿ ಬದಲಾಯಿಸಲು ಎರಡ್ಮೂರು ವಾರ ಸಮಯ ಬೇಕಾಗುತ್ತದೆ. ಸಾರಿಗೆ ಇಲಾಖೆಯ ನಿಯಮಾನುಸಾರ ಈ ಕಾರ್ಯ ನಡೆಯಲಿದೆ. ದ್ವಿಚಕ್ರ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನೂತನ ತಂತ್ರಜ್ಞಾನದ ಬಳಸಿ ವಾಹನದಲ್ಲಿ ರಿವರ್ಸ್, ಬ್ಲೂಟೂತ್, ಮೊಬೈಲ್ ಚಾರ್ಜಿಂಗ್ ಅನ್ನೂ ಅಳವಡಿಸಲಾಗಿದೆ. ಶೀಘ್ರದಲ್ಲಿಯೇ ಹಳೆಯ ನಾಲ್ಕು ಚಕ್ರ ವಾಹನಗಳನ್ನೂ ಇ - ವಾಹನಗಳನ್ನಾಗಿ ಪರಿವರ್ತಿಸುವ ಯೋಜನೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಸರಣಿಯ ಅತ್ಯಾಧುನಿಕ ಸ್ಮಾರ್ಟ್ಫೋನ್ ಬಿಡುಗಡೆ