ದಾವಣಗೆರೆ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಪ್ಪಿಸಲು ದಾವಣಗೆರೆ ಜಿಲ್ಲಾ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ವಿಶೇಷ 'ಸುರಕ್ಷ' ಆ್ಯಪ್‌ವೊಂದನ್ನು ಜಾರಿಗೆ ತಂದಿದ್ದಾರೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಪ್ಯಾನಿಕ್ ಬಟನ್ ಒತ್ತಿದ್ರೆ ತಕ್ಷಣ ನಿಮ್ಮ ರಕ್ಷಣೆಗೆ ಬರುತ್ತಾರೆ ಪೊಲೀಸ್; ಮಹಿಳೆಯರು, ವಿದ್ಯಾರ್ಥಿನಿಯರು ಸಂಕಷ್ಟದಲ್ಲಿದ್ದಾಗ ಈ ಆ್ಯಪ್ ಸಹಕಾರಿಯಾಗಲಿದೆ. ಇದರಲ್ಲಿರುವ ಪ್ಯಾನಿಕ್ ಬಟನ್ ಒತ್ತಿದ್ರೆ ಪೊಲೀಸ್ ಸಿಬ್ಬಂದಿ ನೀವಿರುವಲ್ಲೇ ಹಾಜರ್ ಆಗಲಿದ್ದಾರೆ. ಈಗಾಗಲೇ ಈ ಆ್ಯಪ್ ಅನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದ್ದು, ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ಆ್ಯಪ್ ಕಾರ್ಯದ ಎಸ್ಪಿ ಮಾಹಿತಿ; ಮಹಿಳೆಯರು ಕಷ್ಟದಲ್ಲಿದ್ದರೆ, ಸಮಸ್ಯೆ ಎದುರಾದರೆ, ಪುಂಡರು ನಿಮ್ಮ ಹಿಂದೆ ಬಿದ್ದರೆ ಆ್ಯಪ್‌ನಲ್ಲಿರುವ ಕೆಂಪು ಬಣ್ಣದ ಪ್ಯಾನಿಕ್ ಬಟನ್ ಒತ್ತಿದ್ರೆ ನಿಮಗೆ ಸಹಾಯವಾಗುತ್ತದೆ. ಇನ್ನು ಈ ಪ್ಯಾನಿಕ್ ಬಟನ್ ಒತ್ತಿದ್ರೆ ಸಮಸ್ಯೆಗೊಳಗಾಗಿರುವ ಮಹಿಳೆಯ ಮೊಬೈಲ್ ಲೊಕೇಷನ್ ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ಗೆ ರವಾನೆಯಾಗುತ್ತದೆ. ಬಳಿಕ ಎಮರ್ಜೆನ್ಸಿ ರೆಸ್ಸ್ಪಾನ್ಸ್ ಸರ್ವೀಸ್ ಸಿಸ್ಟಮ್ಗೆ ಬರುತ್ತದೆ. ತಕ್ಷಣ ಪೊಲೀಸರು ನೀವಿರುವ ಸ್ಥಳಕ್ಕೆ ಧಾವಿಸಿ ರಕ್ಷಣೆ ನೀಡುತ್ತಾರೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.
112 ಹಾಗು ಸುರಕ್ಷ ಆ್ಯಪ್ಗೆ ಏನು ವ್ಯತ್ಯಾಸ?: ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಸಮಸ್ಯೆಯಲ್ಲಿ ಸಿಲುಕಿದಾಗ 112ಕ್ಕೆ ಕರೆ ಮಾಡಲಾಗದ ಪರಿಸ್ಥಿತಿ ಎದುರಾದಾಗ ಸುರಕ್ಷ ಆ್ಯಪ್‌ನಲ್ಲಿರುವ ಪ್ಯಾನಿಕ್ ಬಟನ್ ಒತ್ತಿದಾಗ ಸಹಾಯ ದೊರೆಯುತ್ತದೆ. ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು.
ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?: ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವವರು ಮೊದಲು ಪ್ಲೇ ಸ್ಟೋರ್‌ನಲ್ಲಿರುವ ದಾವಣಗೆರೆ ಸ್ಮಾರ್ಟ್ ಸಿಟಿ ಡಿವಿಜಿ ಹೆಲ್ಪ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಆ ಅಪ್ಲಿಕೇಶನ್ ತೆರೆದರೆ ಸುರಕ್ಷ ಆ್ಯಪ್ ಸಿಗುತ್ತದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದನ್ನು ಓಪನ್ ಮಾಡಿದರೆ ತಕ್ಷಣ ಮೊದಲಿಗೆ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಅಟೋಮೆಟಿಕ್ ಆಗಿ ತೆರೆದುಕೊಳ್ಳಲಿದೆ. ಅದರೆ ಲೊಕೇಷನ್ ಅಪ್ಡೇಟ್ ಮಾಡಬೇಕಾಗುತ್ತದೆ. ಲೊಕೇಷನ್ ಟ್ಯಾಗ್ ಮಾಡಿದ ತಕ್ಷಣ ಕಮಾಂಡೋ ಸೆಂಟರ್ಗೆ ಸಂದೇಶ ಹೋಗುತ್ತದೆ. ಪೊಲೀಸರಿಗೆ ಲೊಕೇಷನ್ ಸಿಕ್ಕ ತಕ್ಷಣ ನೀವಿರುವ ಕಡೆ ಆಗಮಿಸಿ ನಿಮ್ಮನ್ನು ರಕ್ಷಣೆ ಮಾಡುತ್ತಾರೆ.
ಓದಿ: ಮಹಿಳೆಯರ ಗಮನಕ್ಕೆ; ಇವುಗಳು ನಿಮ್ಮ ಬಳಿಯಿದ್ರೆ, ನೀವು ಎಲ್ಲಿಗೆ ಹೋದರೂ ಸುರಕ್ಷಿತ! - Women Safety Gadgets