ನವದೆಹಲಿ: ಯಾವುದೇ ಸ್ಟಾರ್ ಲಿಂಕ್ ಟರ್ಮಿನಲ್ ಅನ್ನು ರಷ್ಯಾಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡಿಲ್ಲ ಎಂದು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಸೋಮವಾರ ಹೇಳಿದ್ದಾರೆ. ಆಕ್ರಮಿತ ಉಕ್ರೇನ್ನಲ್ಲಿನ ರಷ್ಯಾದ ಪಡೆಗಳು ಸ್ಟಾರ್ಲಿಂಕ್ನ ಉಪಗ್ರಹ ಇಂಟರ್ನೆಟ್ ಸೌಲಭ್ಯ ಬಳಸುತ್ತಿವೆ ಎಂಬ ಆರೋಪಗಳಿಗೆ ಅವರು ಉತ್ತರಿಸಿದರು.
"ಸ್ಪೇಸ್ಎಕ್ಸ್ ಸ್ಟಾರ್ಲಿಂಕ್ ಟರ್ಮಿನಲ್ಗಳನ್ನು ರಷ್ಯಾಕ್ಕೆ ಮಾರಾಟ ಮಾಡುತ್ತಿದೆ ಎಂದು ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದು ಸಂಪೂರ್ಣವಾಗಿ ಸುಳ್ಳು. ನನಗೆ ತಿಳಿದಿರುವಂತೆ, ಯಾವುದೇ ಸ್ಟಾರ್ಲಿಂಕ್ಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾಕ್ಕೆ ಮಾರಾಟ ಮಾಡಿಲ್ಲ" ಎಂದು ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಷ್ಯಾ ಸರ್ಕಾರ ಅಥವಾ ಅದರ ಮಿಲಿಟರಿಯೊಂದಿಗೆ ಯಾವುದೇ ರೀತಿಯ ವ್ಯವಹಾರವನ್ನು ಮಾಡುವುದಿಲ್ಲ ಎಂದು ಈ ಹಿಂದೆ ಸ್ಪೇಸ್ಎಕ್ಸ್ ಹೇಳಿತ್ತು. ಸ್ಟಾರ್ ಲಿಂಕ್ ಟರ್ಮಿನಲ್ ಗಳು ಜಿಯೋಫೆನ್ಸಿಂಗ್ ಆಗಿರುವುದರಿಂದ ಅವು ಅನಧಿಕೃತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಬಳಕೆದಾರರ ಗುರುತು ಪುರಾವೆಗಳನ್ನು ದೃಢಪಡಿಸಿದ ನಂತರವೇ ಸ್ಟಾರ್ ಲಿಂಕ್ ಸೇವೆಗಳನ್ನು ಒದಗಿಸುತ್ತದೆ ಎಂಬುದು ಗಮನಾರ್ಹ.
"ಸ್ಟಾರ್ಲಿಂಕ್ ಟರ್ಮಿನಲ್ ಅನ್ನು ಎಲ್ಲಿಯಾದರೂ ಅನಧಿಕೃತವಾಗಿ ಬಳಸುತ್ತಿರುವುದು ನಮಗೆ ತಿಳಿದು ಬಂದರೆ ನಾವು ಆ ಬಗ್ಗೆ ತನಿಖೆ ನಡೆಸುತ್ತೇವೆ ಮತ್ತು ಅದನ್ನು ನಿಷ್ಕ್ರಿಯಗೊಳಿಸುತ್ತೇವೆ" ಎಂದು ಕಂಪನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಆದಾಗ್ಯೂ, ರಷ್ಯಾ ಆಕ್ರಮಿಸಿಕೊಂಡ ಉಕ್ರೇನಿಯನ್ ಪ್ರದೇಶಗಳಲ್ಲಿ ಸ್ಟಾರ್ಲಿಂಕ್ ತಂತ್ರಜ್ಞಾನವನ್ನು ಬಳಸಬಹುದೇ ಎಂಬ ಬಗ್ಗೆ ಮಸ್ಕ್ ಅಥವಾ ಸ್ಪೇಸ್ ಎಕ್ಸ್ ಇಬ್ಬರೂ ಸ್ಪಷ್ಟಪಡಿಸಿಲ್ಲ.
ರಷ್ಯಾ ವಿರುದ್ಧ ಉಕ್ರೇನ್ ಆರೋಪ: ಆಕ್ರಮಿತ ಉಕ್ರೇನ್ನಲ್ಲಿರುವ ರಷ್ಯಾದ ಪಡೆಗಳು ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸ್ಟಾರ್ಲಿಂಕ್ ಟರ್ಮಿನಲ್ಗಳನ್ನು ಉಪಗ್ರಹ ಇಂಟರ್ನೆಟ್ಗಾಗಿ ಬಳಸುತ್ತಿವೆ ಎಂದು ಉಕ್ರೇನ್ನ ಮಿಲಿಟರಿ ಗುಪ್ತಚರ ಸಂಸ್ಥೆ ಭಾನುವಾರ ಆರೋಪಿಸಿದೆ. ಭಾಗಶಃ ಆಕ್ರಮಿತ ಉಕ್ರೇನ್ನ ಪೂರ್ವ ಪ್ರದೇಶದ ಡೊನೆಸ್ಕ್ ಕ್ಲಿಶ್ಚಿವ್ಕಾ ಮತ್ತು ಆಂಡ್ರಿವ್ಕಾ ಪಟ್ಟಣಗಳ ಬಳಿ ಹೋರಾಡುತ್ತಿರುವ ರಷ್ಯಾದ 83 ನೇ ವಾಯು ದಾಳಿ ಬ್ರಿಗೇಡ್ ಘಟಕಗಳು ಈ ಟರ್ಮಿನಲ್ಗಳನ್ನು ಬಳಸುತ್ತಿವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾದ ಪಡೆಗಳು ಉಕ್ರೇನ್ ಸೈನಿಕರಿಂದ ಸ್ಟಾರ್ಲಿಂಕ್ ಉಪಕರಣಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆಯಿದೆ ಹಾಗೂ ಈ ಮೂಲಕ ಸ್ಟಾರ್ಲಿಂಕ್ ಟ್ಯಾಪ್ ಮಾಡಿ ರಷ್ಯಾ ಯೋಧರು ಇವನ್ನು ಬಳಸುತ್ತಿರಬಹುದು ಎಂದು ಕೆಲ ಮಾಧ್ಯಮ ವರದಿಗಳು ಶಂಕೆ ವ್ಯಕ್ತಪಡಿಸಿವೆ.
ಇದನ್ನೂ ಓದಿ : ಮಂಗಳನ ಮೇಲೆ 1 ಲಕ್ಷ ಮಾನವರ ವಸಾಹತು: ಎಲೋನ್ ಮಸ್ಕ್ ಮಹತ್ವಾಕಾಂಕ್ಷಿ ದೃಷ್ಟಿಕೋನ