ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಜೀವಿತಾವಧಿ ಕೊನೆಗೊಂಡ ನಂತರ ಅದನ್ನು ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ಕಕ್ಷೆಯಿಂದ ಹೊರತರುವ ಗುತ್ತಿಗೆಯನ್ನು ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಪಡೆದುಕೊಂಡಿದೆ. ಡಿಆರ್ಬಿಟ್ ಎಂದು ಕರೆಯಲಾಗುವ ಬಾಹ್ಯಾಕಾಶ ನಿಲ್ದಾಣವನ್ನು ಕಕ್ಷೆಯಿಂದ ಹೊರತರುವ ಕೆಲಸಕ್ಕಾಗಿ ನಾಸಾ ಸ್ಪೇಸ್ಎಕ್ಸ್ ಗೆ 843 ಮಿಲಿಯನ್ ಡಾಲರ್ ಮೊತ್ತ ಪಾವತಿಸಲಿದೆ.
ಒಪ್ಪಂದದ ಭಾಗವಾಗಿ, ಸ್ಪೇಸ್ ಎಕ್ಸ್ ಡಿಆರ್ಬಿಟ್ ವಾಹನವನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕಕ್ಕೆ ಪೂರೈಸಲಿದೆ. ಇದು ಬಾಹ್ಯಾಕಾಶ ನಿಲ್ದಾಣವನ್ನು ಡಿಆರ್ಬಿಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಡಿಆರ್ಬಿಟ್ ಸಮಯದಲ್ಲಿ ಭೂಮಿಯ ಮೇಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡುತ್ತದೆ. 2030ರಲ್ಲಿ ಕಾರ್ಯಾಚರಣೆಯ ಅವಧಿ ಮುಗಿದ ನಂತರ ಬಾಹ್ಯಾಕಾಶ ನಿಲ್ದಾಣವನ್ನು ನಿಯಂತ್ರಿತ ರೀತಿಯಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಈ ವಾಹನವು ಹೊಂದಿರುತ್ತದೆ
"ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆ ಬದಲಾವಣೆಗಾಗಿ ಅಮೆರಿಕವು ಡಿಆರ್ಬಿಟ್ ವಾಹನ ಬಳಸುವುದರಿಂದ ನಾಸಾ ಮತ್ತು ಅದರ ಅಂತಾರಾಷ್ಟ್ರೀಯ ಪಾಲುದಾರರು ನಿಲ್ದಾಣದ ಕಾರ್ಯಾಚರಣೆಗಳ ಕೊನೆಯಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ನಿಲ್ದಾಣವನ್ನು ಇಳಿಸಲು ಸಾಧ್ಯವಾಗಲಿದೆ" ಎಂದು ವಾಷಿಂಗ್ಟನ್ನಲ್ಲಿರುವ ನಾಸಾ ಪ್ರಧಾನ ಕಚೇರಿಯ ಬಾಹ್ಯಾಕಾಶ ಕಾರ್ಯಾಚರಣೆ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಕೆನ್ ಬೋವರ್ಸಾಕ್ಸ್ ಹೇಳಿದರು.
ಒಪ್ಪಂದದ ಭಾಗವಾಗಿ ಸ್ಪೇಸ್ ಎಕ್ಸ್ ಡಿಆರ್ಬಿಟ್ ಬಾಹ್ಯಾಕಾಶ ನೌಕೆಯನ್ನು ತಯಾರಿಸಿದರೆ, ನಾಸಾ ತನ್ನ ಮಿಷನ್ ಉದ್ದಕ್ಕೂ ಅದನ್ನು ನಿರ್ವಹಿಸಲಿದೆ.
1998ರಿಂದ ಸಿಎಸ್ಎ (ಕೆನಡಿಯನ್ ಸ್ಪೇಸ್ ಏಜೆನ್ಸಿ), ಇಎಸ್ಎ (ಯುರೋಪಿಯನ್ ಸ್ಪೇಸ್ ಏಜೆನ್ಸಿ), ಜಾಕ್ಸಾ (ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ), ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಮತ್ತು ಸ್ಟೇಟ್ ಸ್ಪೇಸ್ ಕಾರ್ಪೊರೇಷನ್ ರೋಸ್ ಕೋಸ್ಮೋಸ್ ಬಾಹ್ಯಾಕಾಶ ಸಂಸ್ಥೆಗಳ ಹಲವಾರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿ ಮರಳಿದ್ದಾರೆ.
ಯುಎಸ್, ಜಪಾನ್, ಕೆನಡಾ ಮತ್ತು ಇಎಸ್ಎಯ ಭಾಗವಹಿಸುವ ದೇಶಗಳು 2030ರವರೆಗೆ ನಿಲ್ದಾಣವನ್ನು ನಿರ್ವಹಿಸಲು ಬದ್ಧವಾಗಿದ್ದರೆ, ರಷ್ಯಾ ಕನಿಷ್ಠ 2028ರವರೆಗೆ ನಿಲ್ದಾಣದ ಕಾರ್ಯಾಚರಣೆಯನ್ನು ಮುಂದುವರಿಸಲು ಬದ್ಧವಾಗಿರುವುದಾಗಿ ಹೇಳಿತ್ತು. ಐಎಸ್ಎಸ್ ಪ್ರಸ್ತುತ ತನ್ನ 24ನೇ ವರ್ಷದ ಕಾರ್ಯಾಚರಣೆಯಲ್ಲಿದೆ ಮತ್ತು ಇಲ್ಲಿಯವರೆಗೆ ಇದರಲ್ಲಿ 3,300ಕ್ಕೂ ಹೆಚ್ಚು ಪ್ರಯೋಗಗಳನ್ನು ಮೈಕ್ರೋಗ್ರಾವಿಟಿಯಲ್ಲಿ ನಡೆಸಲಾಗಿದೆ.
ಇದನ್ನೂ ಓದಿ: ಗ್ಯಾಲಕ್ಸಿ ಝಡ್ ಫೋಲ್ಡ್ 6, ಫ್ಲಿಪ್ 6 ಜುಲೈ 10ರಂದು ಬಿಡುಗಡೆ: ಮುಂಗಡ ಬುಕ್ಕಿಂಗ್ ಆರಂಭ - Samsung Galaxy Launch