ಸಿಯೋಲ್ : ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧರಿತ ಬೆಸ್ಪೋಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕಾಂಬೋ ವಾಷರ್-ಡ್ರೈಯರ್ (Bespoke Artificial Intelligence Combo washer-dryer) ಅನ್ನು ತಯಾರಿಸಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇದನ್ನು ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಸ್ಯಾಮ್ ಸಂಗ್ ಸೋಮವಾರ ತಿಳಿಸಿದೆ.
25 ಕೆಜಿ ವಾಶಿಂಗ್ ಸಾಮರ್ಥ್ಯ ಮತ್ತು 15 ಕೆಜಿ ಹೀಟ್-ಪಂಪ್ ಒಣಗಿಸುವ ಸಾಮರ್ಥ್ಯ ಹೊಂದಿರುವ ಬೆಸ್ಪೋಕ್ ಎಐ ಕಾಂಬೋ ಕಳೆದ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾರುಕಟ್ಟೆಗೆ ಬಂದ ಕೇವಲ ಎರಡು ವಾರಗಳಲ್ಲಿ ಇದು ಭಾರಿ ಜನಪ್ರಿಯತೆ ಗಳಿಸಿದ್ದು, ದಕ್ಷಿಣ ಕೊರಿಯಾ ದೇಶಾದ್ಯಂತ 3,000 ಕ್ಕೂ ಹೆಚ್ಚು ಯುನಿಟ್ಗಳು ಮಾರಾಟವಾಗಿವೆ.
"ನಾವು ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಗೆ ಬೆಸ್ಪೋಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾಂಬೋ ವಾಷರ್-ಡ್ರೈಯರ್ಗಳನ್ನು ಸಾಗಿಸುತ್ತಿದ್ದೇವೆ. ಇದೇ ತಿಂಗಳು ಅಮೆರಿಕದಲ್ಲಿ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಹಾಗೂ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು" ಎಂದು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಗೃಹೋಪಯೋಗಿ ವಿಭಾಗದ ಉಪಾಧ್ಯಕ್ಷ ಮೂ-ಹ್ಯುಂಗ್ ಲೀ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಸ್ಯಾಮ್ ಸಂಗ್ನ ಹೊಸ ಲಾಂಡ್ರಿ ಉಪಕರಣವಾಗಿರುವ ಕಾಂಬೋ ವಾಷರ್-ಡ್ರೈಯರ್ ಅನ್ನು ಪ್ರಮುಖವಾಗಿ ದಕ್ಷಿಣ ಕೊರಿಯಾ ಮತ್ತು ಯುಎಸ್ ಮಾರುಕಟ್ಟೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಆದರೆ ಯುರೋಪ್ನ ಮಾರುಕಟ್ಟೆ ವಿಭಿನ್ನವಾಗಿದ್ದು, ಅಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಸಣ್ಣ ಗೃಹೋಪಯೋಗಿ ಉಪಕರಣಗಳಿಗೆ ಆದ್ಯತೆ ನೀಡಲಾಗುತ್ತದೆ" ಎಂದು ಅವರು ಹೇಳಿದರು.
ಪ್ರತಿದಿನ ವ್ಯವಸ್ಥಿತವಾಗಿ ಲಾಂಡ್ರಿ ಕೆಲಸಗಳನ್ನು ನಿರ್ವಹಿಸಲು ಹೊಸ ಬೆಸ್ಪೋಕ್ ಎಐ ಕಾಂಬೋ ಗ್ರಾಹಕರಿಗೆ ಅನುಕೂಲಕರವಾಗಿದೆ ಮತ್ತು ಇಂಧನ ಉಳಿತಾಯವಾಗುವಂತೆ ಇದನ್ನು ನಿರ್ಮಿಸಲಾಗಿದೆ ಸ್ಯಾಮ್ ಸಂಗ್ ಹೇಳಿದೆ. ಕಂಪನಿಯ ಹೆಚ್ಚಿನ-ದಕ್ಷತೆಯ ಹೀಟ್ ಪಂಪ್ ತಂತ್ರಜ್ಞಾನವನ್ನು ಬಳಸಿಕೊಂಡು, ವಾಷರ್-ಡ್ರೈಯರ್ ಕಾಂಬೋ ಸ್ವತಂತ್ರ ಡ್ರೈಯರ್-ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದಲ್ಲದೆ, ಹೆಚ್ಚಿನ ಕಾರ್ಯಕ್ಷಮತೆಯ ಎಐ ಚಿಪ್ ಗಳು ಮತ್ತು ಟಿಜೆನ್ ಆಪರೇಟಿಂಗ್ ಸಿಸ್ಟಮ್ನ ಸಂಯೋಜನೆಯು ಕಡಿಮೆ ಶಕ್ತಿಯನ್ನು ಬಳಸಿ ಅತ್ಯಧಿಕ ಕೆಲಸದ ಕ್ಷಮತೆಯನ್ನು ನೀಡುತ್ತದೆ. ಸ್ಯಾಮ್ ಸಂಗ್ ದಕ್ಷಿಣ ಕೊರಿಯಾದ ಕಂಪನಿಯಾಗಿದ್ದು, ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದಕರಲ್ಲಿ ಒಂದಾಗಿದೆ.
ಇದನ್ನೂ ಓದಿ : ಆಳ ಸಮುದ್ರ ಅಧ್ಯಯನ: ಭಾರತದ 'ಮತ್ಸ್ಯ' ಸಬ್ಮರಿನ್ ವರ್ಷಾಂತ್ಯಕ್ಕೆ ಸಿದ್ಧ