ನವದೆಹಲಿ: 2024 ಮತ್ತು 2030ರ ಅವಧಿಯ ಮಧ್ಯೆ ಜಾಗತಿಕವಾಗಿ ಇ-ಸಿಮ್ ಹೊಂದಿದ ಸಾಧನಗಳ ಮಾರಾಟವು 9 ಬಿಲಿಯನ್ ಯುನಿಟ್ಗಳನ್ನು ಮೀರುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಇ-ಸಿಮ್ ಸಾಧನಗಳ ಮಾರಾಟ ಪ್ರಮಾಣ ಶೇಕಡಾ 22 ರಷ್ಟು ಸಿಎಜಿಆರ್ ನಲ್ಲಿ ಬೆಳೆಯಲಿದೆ ಎಂದು ಹೊಸ ವರದಿ ಶುಕ್ರವಾರ ತೋರಿಸಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, 2030 ರ ವೇಳೆಗೆ ಜಾಗತಿಕವಾಗಿ ಮಾರಾಟವಾಗುವ ಎಲ್ಲಾ ಸೆಲ್ಯುಲಾರ್ ಸಾಧನಗಳಲ್ಲಿ ಸುಮಾರು ಶೇಕಡಾ 70 ರಷ್ಟು ಸಾಧನಗಳು ಇ-ಸಿಮ್ ಅಥವಾ ಐ-ಸಿಮ್ ಚಾಲಿತವಾಗಿದ್ದು, ಇವುಗಳಲ್ಲಿ ಸ್ಮಾರ್ಟ್ ಫೋನ್ಗಳು ಮತ್ತು ಸೆಲ್ಯುಲಾರ್ ಐಒಟಿ ಮಾಡ್ಯೂಲ್ಗಳ ಪಾಲು ಹೆಚ್ಚಾಗಿರುತ್ತದೆ.
2022 ರಲ್ಲಿ ಯುಎಸ್-ಎಕ್ಸ್ಕ್ಲೂಸಿವ್ ಇ-ಸಿಮ್ ಮೇಲೆ ಮಾತ್ರ ಚಾಲಿತವಾಗುವ ಐಫೋನ್ ಬಿಡುಗಡೆಯಾದ ನಂತರ ಉದ್ಯಮವು ಒಂದು ಏರಿಳಿತದ ಹಂತವನ್ನು ದಾಟಿದೆ ಮತ್ತು ಈಗ ಹೈಪರ್ಗ್ರೋತ್ ಅವಧಿಯನ್ನು ಪ್ರವೇಶಿಸುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
"ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ಕಂಪನಿಗಳು ತಮ್ಮ ಪ್ರಮುಖ ಸಾಧನಗಳನ್ನು ಮೀರಿ ಮಧ್ಯಮ ಶ್ರೇಣಿಯ ಸಾಧನಗಳಲ್ಲಿ ಕೂಡ ಈಗ ಇ-ಸಿಮ್ ಅನ್ನು ಅಳವಡಿಸಲು ತಯಾರಿ ಪ್ರಾರಂಭಿಸಿದ್ದಾರೆ. ಹೊಸ ಇ-ಸಿಮ್ ಮೇಲೆ ಮಾತ್ರ ಕೆಲಸ ಮಾಡುವ ಐಪ್ಯಾಡ್ ಬಿಡುಗಡೆಯು ಭವಿಷ್ಯದಲ್ಲಿ ಇ-ಸಿಮ್ ಮಾತ್ರವೇ ಇರಲಿದೆ ಎಂಬುದನ್ನು ಸೂಚಿಸುವ ಮತ್ತೊಂದು ಸಂಕೇತವಾಗಿದೆ " ಎಂದು ಸಂಶೋಧನಾ ವಿಶ್ಲೇಷಕ ಸಿದ್ಧಾಂತ್ ಕ್ಯಾಲಿ ಹೇಳಿದ್ದಾರೆ. ಪ್ರಯಾಣ ಮತ್ತು ರೋಮಿಂಗ್ನಂತಹ ಸಂದರ್ಭಗಳಲ್ಲಿ ಅಲ್ಪಾವಧಿಯಲ್ಲಿ ಇ-ಸಿಮ್ ಬಳಕೆ ಹೆಚ್ಚು ಸೂಕ್ತವಾಗಿದೆ ಎಂದು ಅವರು ತಿಳಿಸಿದರು.
ಆದಾಗ್ಯೂ, ಭೌತಿಕ ಸಿಮ್ಗಳನ್ನು ನಿರ್ವಹಿಸಲು ತುಂಬಾ ಕಷ್ಟಕರವಾದ ಕನೆಕ್ಟೆಡ್ ಕಾರುಗಳು, ಗೇಟ್ವೇಗಳು ಮತ್ತು ರೂಟರ್ಗಳು ಮತ್ತು ಡ್ರೋನ್ಗಳಂಥ ಸಾಧನಗಳಲ್ಲಿ ಇ-ಸಿಮ್ ಅಥವಾ ಐ-ಸಿಮ್ಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ವರದಿ ತಿಳಿಸಿದೆ. ದೀರ್ಘಾವಧಿಯಲ್ಲಿ, ಇ-ಸಿಮ್ ಈ ಕೈಗಾರಿಕೆಗಳಿಗೆ ಡೀಫಾಲ್ಟ್ ಸಿಮ್ ಆಗಲಿದೆ ಎಂದು ಅದು ಹೇಳಿದೆ. ಸದ್ಯ ಜಾಗತಿಕವಾಗಿ 400 ಕ್ಕೂ ಹೆಚ್ಚು ಮೊಬೈಲ್ ಆಪರೇಟರ್ಗಳು ಇ-ಸಿಮ್ ಸೇವೆಗಳನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಸರಾಸರಿ 50 ಕ್ಕೂ ಹೆಚ್ಚು ಗ್ರಾಹಕ ಸಾಧನಗಳು ಇ-ಸಿಮ್ಗಳ ಮೇಲೆ ಚಾಲಿತವಾಗಿವೆ.
"ಐ-ಸಿಮ್ ಬಳಕೆಯ ವಿಷಯದಲ್ಲಿ ಇದು ಆರಂಭಿಕ ಮಾತ್ರವಾಗಿದೆ. ಆದಾಗ್ಯೂ, ಮುಂದಿನ ಮೂರು ವರ್ಷಗಳಲ್ಲಿ ಐ-ಸಿಮ್ ಅಳವಡಿಕೆಯು ವೇಗ ಪಡೆಯಲಿದೆ. ಈ ತಂತ್ರಜ್ಞಾನವು ವೆಚ್ಚ, ಗಾತ್ರ ಮತ್ತು ಸಂಕೀರ್ಣತೆಯನ್ನು ಕಡಿಮೆ ಮಾಡುವ ಮೂಲಕ ಸಾಧನಗಳಿಗೆ ಹೆಚ್ಚಿನ ದಕ್ಷತೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಹಿರಿಯ ವಿಶ್ಲೇಷಕ ಅಂಕಿತ್ ಮಲ್ಹೋತ್ರಾ ಹೇಳಿದ್ದಾರೆ.
ಇದನ್ನೂ ಓದಿ : ಎಸ್-350 ವಿಟ್ಯಾಜ್: ರಷ್ಯಾದಿಂದ ಪಾಶ್ಚಿಮಾತ್ಯ ಕ್ಷಿಪಣಿಗಳನ್ನು ಧ್ವಂಸ ಮಾಡಬಲ್ಲ ರಕ್ಷಣಾ ವ್ಯವಸ್ಥೆ - Russian Air Defence System