ವಾಷಿಂಗ್ಟನ್: ತಾಂತ್ರಿಕ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಕಿಯಾಗಿರುವ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಬಾಹ್ಯಾಕಾಶ ನೌಕೆ ಬೋಯಿಂಗ್ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಇಂಜಿನಿಯರ್ಗಳು ಸರಿಪಡಿಸುವ ಕಾರ್ಯ ಮುಂದುವರಿದಿದೆ.
ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಭರವಸೆ ನೀಡಿರುವ ನಾಸಾ, ನೆಲದ ಮೇಲಿನ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಗಗನಯಾತ್ರಿಗಳು ಹಿಂದಿರುಗುವ ದಿನಾಂಕವನ್ನು ನಿಗದಿಪಡಿಸಲಾಗುವುದಿಲ್ಲ ಎಂದು ಶುಕ್ರವಾರ ಘೋಷಿಸಿದೆ. ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್, "ನಾವು ಮನೆಗೆ ಬರಲು ಆತುರದಲ್ಲಿಲ್ಲ" ಎಂದು ಹೇಳಿದ್ದಾರೆ.
ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ಬುಚ್ ವಿಲ್ಮೋರ್ ಎಂಬ ಇಬ್ಬರು ಗಗನಯಾತ್ರಿಗಳು ಜೂನ್ 5 ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ವಾಹನದ ಮೂಲಕ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಹಲವು ವರ್ಷಗಳ ವಿಳಂಬದ ಹಾಗೂ ಹಿನ್ನಡೆಯ ನಂತರ ಬೋಯಿಂಗ್ ಕೈಗೊಂಡ ಮೊದಲ ಗಗನಯಾತ್ರಿ ಉಡಾವಣೆ ಇದಾಗಿದೆ. ಸ್ಟಾರ್ಲೈನರ್ ಅನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಿದ ನಂತರ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಇದೀಗ ಸಣ್ಣದೊಂದು ತಾಂತ್ರಿಕ ಸಮಸ್ಯೆ ಎದುರಾಗಿದೆ. ಅದನ್ನು ಸರಿಪಡಿಸುವ ಕೆಲಸದಲ್ಲೊ ಬಾಹ್ಯಾಕಾಶ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ.
ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಎಂಟು ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಆದರೆ ನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಗಗನಯಾತ್ರಿಗಳು ಭೂಮಿಗೆ ಮರಳುವುದು ವಿಳಂಬವಾಗುತ್ತಿದೆ. ನಾಸಾ ಮತ್ತು ಬೋಯಿಂಗ್ ಮುಂದಾಳತ್ವದ ಬಾಹ್ಯಾಕಾಶ ಇಂಜಿನಿಯರ್ಗಳು ಸ್ಟಾರ್ಲೈನರ್ ಕ್ರ್ಯೂ ಫ್ಲೈಟ್ ಟೆಸ್ಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ.
ಉಡಾವಣೆಯಾದ ಒಂದು ದಿನದ ಬಳಿಕ ಬಾಹ್ಯಾಕಾಶ ನಿಲ್ದಾಣ ತಲುಪಿ ಸ್ಟಾರ್ಲೈನರ್ ಡಾಕಿಂಗ್ ಮಾಡುವ ಸಮಯದಲ್ಲಿ ಥ್ರಸ್ಟರ್ಗಳು ಸ್ಥಗಿತಗೊಂಡು ಸಮಸ್ಯೆ ಎದುರಾಯಿತು. ಬಾಹ್ಯಾಕಾಶ ನೌಕೆಯ 28 ಥ್ರಸ್ಟರ್ಗಳಲ್ಲಿ ಐದು ಡಾಕಿಂಗ್ ಸಮಯದಲ್ಲಿ ವಿಫಲವಾಗಿದ್ದವು. ಒಂದು ಥ್ರಸ್ಟರ್ ಅನ್ನು ಹೊರತಪಡಿಸಿ, ಉಳಿದೆಲ್ಲವನ್ನೂ ಮರುಪ್ರಾರಂಭಿಸಲಾಗಿದೆ. ಸ್ಟಾರ್ಲೈನರ್ ಕಕ್ಷೆಗೆ ಉಡಾವಣೆಯಾದಾಗ ಸಣ್ಣ ಹೀಲಿಯುಂ ಸೋರಿಕೆ ಕಂಡು ಬಂದಿತ್ತು. ನಂತರ ಹಾರಾಟದ ಸಮಯದಲ್ಲಿ ಹಲವಾರು ಸೋರಿಕೆಗಳು ಕಂಡು ಬಂದವು. ಥ್ರಸ್ಟರ್ಗಳಿಗೆ ಇಂಧನವನ್ನು ಒತ್ತಡ ಹೇರಿ ನೀಡಲು ಹೀಲಿಯಂ ಅನ್ನು ಬಳಸಲಾಗುತ್ತದೆ.