ಸ್ಯಾನ್ ಫ್ರಾನ್ಸಿಸ್ಕೋ: ಆರ್ಟೆಮಿಸ್ ಗಗನಯಾತ್ರಿಗಳು ಚಂದ್ರನ ಮೇಲೆ ಪ್ರಯಾಣಿಸಲು ಬಳಸುವ ಲೂನಾರ್ ಟೆರೇನ್ ವೆಹಿಕಲ್ (ಎಲ್ಟಿವಿ) (lunar terrain vehicle -LTV) ಅನ್ನು ತಯಾರಿಸಲು ನಾಸಾ ಮೂರು ಕಂಪನಿಗಳನ್ನು ಆಯ್ಕೆ ಮಾಡಿದೆ. ಇಂಟ್ಯೂಟಿವ್ ಮಶೀನ್ಸ್, ಲೂನಾರ್ ಔಟ್ಪೋಸ್ಟ್ ಮತ್ತು ವೆಂಚೂರಿ ಆಸ್ಟ್ರೋಲ್ಯಾಬ್ ಈ ಮೂರು ಕಂಪನಿಗಳು ಈಗ ಆರ್ಟೆಮಿಸ್ ಗಗನಯಾತ್ರಿಗಳಿಗಾಗಿ ಎಲ್ಟಿವಿಯನ್ನು ತಯಾರಿಸಲಿವೆ.
ಆರ್ಟೆಮಿಸ್ ಅಭಿಯಾನದ ನಿಮಿತ್ತ ಚಂದ್ರನ ಮೇಲೆ ವೈಜ್ಞಾನಿಕ ಸಂಶೋಧನೆ ನಡೆಸಲು ಮತ್ತು ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳಿಗೆ ತಯಾರಿ ನಡೆಸಲು ಈ ವಾಹನವು ಸಹಾಯ ಮಾಡುತ್ತದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.
"ನಾವು ಚಂದ್ರನ ಮೇಲೆ ಅಧ್ಯಯನ ನಡೆಸಲು ಆರ್ಟೆಮಿಸ್ ಪೀಳಿಗೆಯ ಚಂದ್ರ ಪರಿಶೋಧನಾ ವಾಹನದ ತಯಾರಿಕೆ ಎದುರು ನೋಡುತ್ತಿದ್ದೇವೆ. ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವ ಅವರ ಸಾಮರ್ಥ್ಯವನ್ನು ಈ ವಾಹನವು ಬಹಳವಾಗಿ ಹೆಚ್ಚಿಸುತ್ತದೆ. ಹಾಗೆಯೇ ಸಿಬ್ಬಂದಿ ಕಾರ್ಯಾಚರಣೆಗಳ ನಡುವೆ ಇದು ವೈಜ್ಞಾನಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಹೂಸ್ಟನ್ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕಿ ವನೆಸ್ಸಾ ವೈಚ್ ಹೇಳಿದರು.
"ನಾವು ಕಾಲ್ನಡಿಗೆ ಮೂಲಕ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಪ್ರಯಾಣಿಸಲು ಎಲ್ಟಿವಿಯನ್ನು ಬಳಸಲಿದ್ದೇವೆ. ಇದು ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಅನ್ವೇಷಿಸುವ ಮತ್ತು ಸಂಶೋಧನೆ ಮಾಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ" ಎಂದು ವಾಷಿಂಗ್ಟನ್ನಲ್ಲಿರುವ ನಾಸಾ ಪ್ರಧಾನ ಕಚೇರಿಯ ಮುಖ್ಯ ಪರಿಶೋಧನಾ ವಿಜ್ಞಾನಿ ಜಾಕೋಬ್ ಬ್ಲೀಚರ್ ಹೇಳಿದರು.
ಆರ್ಟೆಮಿಸ್-5 ಸಮಯದಲ್ಲಿ ಸಿಬ್ಬಂದಿ ಕಾರ್ಯಾಚರಣೆಗಳಿಗೆ ಎಲ್ಟಿವಿಯ ಬಳಕೆಯನ್ನು ಪ್ರಾರಂಭಿಸಲು ನಾಸಾ ಉದ್ದೇಶಿಸಿದೆ. ಎಲ್ಟಿವಿ ವಾಹನವನ್ನು ತಯಾರಿಸುವ ಈ ಒಪ್ಪಂದವು ಒಟ್ಟು ಗರಿಷ್ಠ $ 4.6 ಬಿಲಿಯನ್ ಸಂಭಾವ್ಯ ಮೌಲ್ಯವನ್ನು ಹೊಂದಿದೆ.
ಪ್ರತಿಯೊಂದು ಪೂರೈಕೆದಾರರ ಕಂಪನಿಯು ಕಾರ್ಯಸಾಧ್ಯತಾ ವರದಿಯೊಂದಿಗೆ ಕೆಲಸವನ್ನು ಆರಂಭಿಸಲಿದ್ದಾರೆ. ಇದು ಪ್ರಾಥಮಿಕ ವಿನ್ಯಾಸ ಪರಿಪಕ್ವತೆಯ ಯೋಜನೆಯ ಹಂತದ ಮೂಲಕ ನಾಸಾದ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಒಂದು ವರ್ಷದ ವಿಶೇಷ ಅಧ್ಯಯನವಾಗಿರುತ್ತದೆ.
ಆರ್ಟೆಮಿಸ್ ಕಾರ್ಯಾಚರಣೆಗಳ ನಡುವೆ, ಸಿಬ್ಬಂದಿ ಚಂದ್ರನ ಮೇಲೆ ಇಲ್ಲದಿದ್ದಾಗ, ಅಗತ್ಯವಿರುವಂತೆ ನಾಸಾದ ವೈಜ್ಞಾನಿಕ ಉದ್ದೇಶಗಳನ್ನು ಬೆಂಬಲಿಸಲು ಎಲ್ಟಿವಿ ದೂರದಿಂದಲೇ ಕಾರ್ಯನಿರ್ವಹಿಸುತ್ತದೆ. ಆರ್ಟೆಮಿಸ್ ಮೂಲಕ ನಾಸಾ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕಳುಹಿಸಲಿದೆ. ನಾಸಾದ ಆರ್ಟೆಮಿಸ್ ಯೋಜನೆ ವಿಳಂಬವಾಗಿದ್ದು, ಪ್ರಸ್ತುತ ಇದು 2026ರ ಸೆಪ್ಟೆಂಬರ್ ವೇಳೆಗೆ ಕಾರ್ಯಗತಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ - TESLA