ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಿಗೆ ಬೀಳುವ 'ಲೈಕ್'ಗಳು ಅದರ ಮೆಚ್ಚುಗೆಯ ಪ್ರತೀಕವಾಗಿದ್ದರೂ, ಕೆಲವೊಮ್ಮೆ ಇದು ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಮೈಕ್ರೋ ಬ್ಲಾಗಿಂಗ್ ತಾಣ 'ಎಕ್ಸ್'ನಲ್ಲಿ ಲೈಕ್ ಹೈಡ್ ಮಾಡಲಾಗಿದೆ. ಇದಾದ ಕೆಲವೇ ಗಂಟೆಗಳ ಬಳಿಕ 'ಎಕ್ಸ್' ಉತ್ತಮ ಫಲಿತಾಂಶ ಕಂಡಿದೆ. ವಿಶ್ವಾದ್ಯಂತ ಲಕ್ಷಗಟ್ಟಲೆ ಬಳಕೆದಾರರು ಲೈಕ್ ಬಟನ್ ಅನ್ನು ಹೆಚ್ಚೆಚ್ಚು ಬಳಸಲು ಮುಂದಾಗುತ್ತಿದ್ದಾರೆ. ಇದರಿಂದ ಲೈಕ್‌ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕಂಪನಿಯ ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಬಳಕೆದಾರರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ 'ಲೈಕ್' ಮರೆಮಾಚಲಾಗಿದೆ. ಇದೀಗ ಬಳಕೆದಾರರು ಮಾತ್ರ ತಾವು ಲೈಕ್ ಮಾಡಿದ ಪೋಸ್ಟ್ ನೋಡಬಹುದು. ಆದರೆ, ಇತರರು ನೋಡಲು ಸಾಧ್ಯವಿಲ್ಲ. ಬಳಕೆದಾರರ ಪ್ರೊಫೈಲ್ ಪೇಜ್ನಲ್ಲಿ ಮಾತ್ರ ಲೈಕ್ ಟ್ಯಾಬ್ ಕಾಣಿಸುತ್ತದೆ.
ಮಸ್ಕ್ ಅವರ ಈ ಹೊಸ ನಿಯಮ ಬುಧವಾರದಿಂದ ಜಾರಿಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲೈಕ್ ಬಳಕೆಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಮಸ್ಕ್ ತಮ್ಮ ಹೊಸ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕವಾಗಿ ಯಾರು, ಯಾವ ಪೋಸ್ಟ್ಗೆ ಲೈಕ್ ಮಾಡಿದರು ಎಂದು ತಿಳಿಯದ ಹಿನ್ನೆಲೆಯಲ್ಲಿ ಬಳಕೆದಾರರು ಮುಕ್ತವಾಗಿ ತಮ್ಮಿಷ್ಟದ ಪೋಸ್ಟ್ಗೆ ಲೈಕ್ ಬಟನ್ ಒತ್ತುತ್ತಿದ್ದಾರೆ.
'ಎಕ್ಸ್'ನಲ್ಲಿ ಲೈಕ್ ಮಾಡಿದಲ್ಲಿ, ಅದನ್ನು ನೀವು ಮತ್ತು ಲೇಖಕರೆಂದರೆ ಪೋಸ್ಟ್ ಮಾಡಿದವರು ಮಾತ್ರ ಕಾಣಬಹುದಾಗಿದೆ. ಇದರಿಂದ ಬಳಕೆದಾರರು ಇತರರಿಂದ ಟ್ರೋಲ್ಗೆ ಗುರಿಯಾಗುವುದು ಅಥವಾ ಖಾಸಗಿತನದ ಧಕ್ಕೆ ಉಂಟಾಗುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಇಂಜಿನಿಯರಿಂಗ್ ತಂಡದ ಪ್ರಕಾರ, ಲೈಕ್ ಕೌಂಟ್ ಮತ್ತು ಇತರೆ ಅಂಕಿಅಂಶವನ್ನು ಬಳಕೆದಾರರು ತಮ್ಮದೇ ಪೋಸ್ಟ್ ಅಡಿಯಲ್ಲಿನ ನೋಟಿಫಿಕೇಶನ್ ಕೆಳಗೆ ಕಾಣಬಹುದು. ಲೈಕ್ ಕಾಣದಂತೆ ಮಾಡುವ ಆಯ್ಕೆ ಈ ಹಿಂದೆ ಹಣಪಾವತಿ ಮಾಡುವ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಲಭ್ಯ ಇತ್ತು.
2022ರಲ್ಲಿ 'ಎಕ್ಸ್' ಮೈಕ್ರೋಬ್ಲಾಗಿಂಗ್ ತಾಣ ಖರೀದಿಸಿದಾಗಿನಿಂದ ಎಲೋನ್ ಮಸ್ಕ್ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಹೆಸರು, ಲೋಗೋ, ಬ್ಲೂ ಟಿಕ್ ಸೇರಿದಂತೆ ಅನೇಕ ಮಾರ್ಪಾಡುಗಳಾಗಿವೆ.(ಐಎಎನ್ಎಸ್)
ಇದನ್ನೂ ಓದಿ: ಟ್ವಿಟರ್ನಿಂದ ಸಂಪೂರ್ಣ ಹೊರಬಂದ X; ಡೊಮೈನ್ ಒಡೆತನ ಸಾಧಿಸಿದ ಮಸ್ಕ್