ನವದೆಹಲಿ: ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಫೆ 7 ಮತ್ತು 8ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯು ಅವರ ವಾರ್ಷಿಕ ಪ್ರವಾಸದ ಭಾಗವಾಗಿದ್ದು, ಈ ವೇಳೆ ಅವರು ಕೃತಕ ಬುದ್ದಿಮತ್ತೆ (ಎಐ) ಹೊಸ ಅವಕಾಶಗಳ ಕುರಿತು ಎಐ ಸ್ಟಾರ್ಟ್ಅಪ್ಗಳ ಮುಖ್ಯಸ್ಥರನ್ನು ಭೇಟಿಯಾಗಿ, ಚರ್ಚಿಸುವ ಸಾಧ್ಯತೆ ಇದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಸ್ಥೆ, ಮೈಕ್ರೋಸಾಫ್ಟ್ ಸಿಇಒ, ಅಧ್ಯಕ್ಷ ಸತ್ಯ ನಾದೆಲ್ಲಾ, ಭಾರತದ ಎಐ ಜೊತೆಗಿನ ಹೊಸ ಅವಕಾಶಗಳ ಅನ್ವೇಷಣೆ ಕುರಿತು ಭಾರತದ ಡೆವಲಪರ್ ಸಮುದಾಯ ಮತ್ತು ಟೆಕ್ನಾಲಾಜಿಸ್ಟ್ ಜೊತೆಗೆ ಮಾತನಾಡಲಿದ್ದಾರೆ ಎಂದು ತಿಳಿಸಿದೆ. ದಕ್ಷಿಣ ಏಷ್ಯಾ ಮತ್ತು ಮೈಕ್ರೋಸಾಫ್ಟ್ ಭಾರತದ ಅಧ್ಯಕ್ಷ ಪುನೀತ್ ಚಂದೊಕ್, ವಾರಗಳ ಹಿಂದೆ ಆಂತರಿಕ ಮೇಲ್ನಲ್ಲಿ ಈ ಕುರಿತು ತಿಳಿಸಿದ್ದ ಅವರು, ನಾದೆಲ್ಲಾ ಅವರ ಭಾರತದ ಭೇಟಿಯು ದೇಶದಲ್ಲಿ ತಂತ್ರಜ್ಞಾನ ಬಳಕೆಯ ಅವಕಾಶ ಹೆಚ್ಚಿಸಲಿದೆ ಎಂದಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ, ಅಮೆರಿಕ ಮತ್ತು ಭಾರತದ ತಂತ್ರಜ್ಞಾನ ಕಾರ್ಯದರ್ಶಿಗಳು ಸೇರಿದಂತೆ ನಾದೆಲ್ಲಾ, ಅಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚ್ಚೈ ಮತ್ತು ಆ್ಯಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿಯಾಗಿದ್ದರು. ಭಾರತವೂ ಜಗತ್ತಿನಲ್ಲಿಯೇ ಸ್ಟಾರ್ಟ್ಅಪ್ ಪೂರಕ ವ್ಯವಸ್ಥೆ ಹೊಂದಿದೆ. ಮೈಕ್ರೋಸಾಫ್ಟ್ ಭಾರತ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾದ ಬದ್ದತೆ ಹೊಂದಿದೆ. ಇದು ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಿದೆ ಎಂದು ಸಂಸ್ಥೆ ತಿಳಿಸಿದೆ
ಈ ನಡುವೆ ಮೈಕ್ರೋಸಾಫ್ಟ್ ಮೂರು ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಆಪಲ್ ನಂತರ ಈ ಸಾಧನೆ ತೋರಿದ ಎರಡನೇ ಸಂಸ್ಥೆಯಾಗಿ ಮೈಕ್ರೋಸಾಫ್ಟ್ ಸಂಸ್ಥೆ ಹೊರ ಹೊಮ್ಮಿದೆ. 48 ವರ್ಷಗಳ ಸಂಸ್ಥೆಯ ಇತಿಹಾಸದಲ್ಲಿ ಮೈಕ್ರೋಸಾಫ್ಟ್ ಮೊದಲ ಬಾರಿಗೆ 3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಪಡೆಯುವ ಮೂಲಕ ಸುದ್ದಿಯಾಗಿದೆ.
ಕೋವಿಡ್ ಬಳಿಕ ಕಳೆದೆರಡು ವರ್ಷದಿಂದ ಜನವರಿ - ಫೆಬ್ರವರಿಯಲ್ಲಿ ಅವರು ಭಾರತಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ಅಂದರೆ 2023ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬೆಂಗಳೂರಿನಲ್ಲಿ ನಡೆದ ಫ್ಯೂಚರ್ ರೆಡಿ ಟೆಕ್ನಾಲಜಿ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ತಲುಪಿದ ಮೈಕ್ರೋಸಾಫ್ಟ್ ಮಾರುಕಟ್ಟೆ ಮೌಲ್ಯ