ನವದೆಹಲಿ: ವಾಟ್ಸ್ಆ್ಯಪ್, ಫೇಸ್ಬುಕ್, ಮೆಸೆಂಜರ್ ಅಪ್ಲಿಕೇಶನ್ಗಳು ಮತ್ತು ಮೆಟಾ ಡಾಟ್ ಎಐ ಪೋರ್ಟಲ್ಗಳಲ್ಲಿ 'ಮೆಟಾ ಎಐ' (Meta AI) ಎಐ ಅಸಿಸ್ಟಂಟ್ ವೈಶಿಷ್ಟ್ಯ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಸೋಮವಾರ ಪ್ರಕಟಿಸಿದೆ. ಇದರೊಂದಿಗೆ ಬಳಕೆದಾರರು ಇನ್ನು ಮುಂದೆ ತಾವು ಬಳಸುತ್ತಿರುವ ಅಪ್ಲಿಕೇಶನ್ನಿಂದ ಹೊರಗೆ ಹೋಗದೆಯೇ ತಮಗೆ ಬೇಕಾದ ಕೆಲಸಗಳನ್ನು ಮಾಡಲು, ಕಂಟೆಂಟ್ ಕ್ರಿಯೇಟ್ ಮಾಡಲು ಮತ್ತು ಯಾವುದೇ ವಿಷಯಗಳನ್ನು ಇನ್ನಷ್ಟು ಆಳವಾಗಿ ತಿಳಿಯಲು ಎಲ್ಲ ಅಪ್ಲಿಕೇಶನ್ಗಳ ಫೀಡ್ಸ್ ಮತ್ತು ಚಾಟ್ಗಳಲ್ಲಿ ಮೆಟಾ ಎಐ ಅನ್ನು ಬಳಸಬಹುದಾಗಿದೆ.
"ವಿಶ್ವದ ಪ್ರಮುಖ ಎಐ ಅಸಿಸ್ಟಂಟ್ಗಳಲ್ಲಿ ಒಂದಾದ ಮೆಟಾ ಎಐ ಈಗ ವಾಟ್ಸ್ಆ್ಯಪ್, ಫೇಸ್ಬುಕ್, ಮೆಸೆಂಜರ್, ಇನ್ಸ್ಟಾಗ್ರಾಮ್ ಮತ್ತು ಮೆಟಾ ಡಾಟ್ ಎಐ ಗಳ ಮೂಲಕ ಭಾರತದಲ್ಲಿ ಲಭ್ಯವಾಗುತ್ತಿದೆ. ಇದನ್ನು ಇಲ್ಲಿಯವರೆಗೆ ನಮ್ಮ ಅತ್ಯಂತ ಸುಧಾರಿತ ಎಲ್ಎಲ್ಎಂ ಆಗಿರುವ ಮೆಟಾ ಲಾಮಾ 3 ಯೊಂದಿಗೆ ನಿರ್ಮಿಸಲಾಗಿದೆ." ಎಂದು ಮೆಟಾ ಹೇಳಿದೆ.
ಮೆಟಾ ಮೊದಲ ಬಾರಿಗೆ ಕಳೆದ ವರ್ಷದ ಕನೆಕ್ಟ್ ಸಮಾವೇಶದಲ್ಲಿ ಮೆಟಾ ಎಐ ಅನ್ನು ಘೋಷಿಸಿತ್ತು. ಏಪ್ರಿಲ್ನಿಂದ ಲಾಮಾ 3 ಯೊಂದಿಗೆ ನಿರ್ಮಿಸಲಾದ ಮೆಟಾ ಎಐನ ಇತ್ತೀಚಿನ ಆವೃತ್ತಿಗಳನ್ನು ಮೆಟಾ ಪ್ರಪಂಚದಾದ್ಯಂತದ ಬಳಕೆದಾರರಿಗೆ ನೀಡುತ್ತಿದೆ.
"ನಮ್ಮ ಅತ್ಯಂತ ಶಕ್ತಿಶಾಲಿ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಂ) ಅಡಿಯಲ್ಲಿ, ಮೆಟಾ ಎಐ ಹಿಂದೆಂದಿಗಿಂತಲೂ ಉತ್ತಮವಾಗಿದೆ. ನಮ್ಮ ಮುಂದಿನ ಪೀಳಿಗೆಯ ಅಸಿಸ್ಟಂಟ್ ಸಾಧನಗಳನ್ನು ಇನ್ನೂ ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ ಮತ್ತು ಇದು ಜನರ ಜೀವನದಲ್ಲಿ ಮತ್ತಷ್ಟು ಸಹಾಯಕವಾಗಲಿದೆ ಎಂಬುದು ನಮ್ಮ ಆಶಯವಾಗಿದೆ" ಎಂದು ಅದು ಹೇಳಿದೆ.
ವಾಟ್ಸ್ಆ್ಯಪ್ ಗ್ರೂಪ್ ಚಾಟ್ಗಳಲ್ಲಿ ನೀವು ಮೆಟಾ ಎಐಗೆ ಉತ್ತಮ ರೆಸ್ಟೋರೆಂಟ್ಗಳ ಬಗ್ಗೆ ಮಾಹಿತಿ ಕೇಳಬಹುದು, ಪ್ರವಾಸದಲ್ಲಿದ್ದಾಗ ಯಾವ ಪ್ರೇಕ್ಷಣೀಯ ಸ್ಥಳಕ್ಕೆ ಹೋಗಬಹುದು ಎಂದು ತಿಳಿಯಬಹುದು, ವೆಬ್ನಲ್ಲಿ ಮಲ್ಟಿಪಲ್ ಚಾಯ್ಸ್ ಟೆಸ್ಟ್ ರಚಿಸುವಂತೆ ಕೇಳಬಹುದು. ಹೀಗೆ ಮೆಟಾ ಎಐ ಅನ್ನು ಬಳಕೆದಾರರು ತಮ್ಮ ವಿಭಿನ್ನ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದು.
"ನಿಮ್ಮ ಮೊದಲ ಅಪಾರ್ಟ್ಮೆಂಟ್ಗೆ ಶಿಫ್ಟ್ ಅಗುತ್ತಿರುವಿರಾ? ಹಾಗಾದರೆ ಆ ಮನೆಯಲ್ಲಿನ ಒಳಾಂಗಣದ ವಿನ್ಯಾಸ ಹೇಗಿರಬೇಕೆಂದು ನೀವು ಬಯಸುವಿರಿ? ನಿಮ್ಮ ಕಲ್ಪನೆಯನ್ನು ಮೆಟಾ ಎಐಗೆ ಹೇಳಿದರೆ ಸಾಕು.. ಆ ವಿನ್ಯಾಸವನ್ನು ಅದು ಚಿತ್ರಿಸಿ ತೋರಿಸುತ್ತದೆ ಹಾಗೂ ಆ ಪೀಠೋಪಕರಣಗಳನ್ನು ಎಲ್ಲಿ ಖರೀದಿಸಬಹುದು ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ" ಎಂದು ಮೆಟಾ ಉದಾಹರಣೆಯೊಂದನ್ನು ಉಲ್ಲೇಖಿಸಿದೆ.
ಇದನ್ನೂ ಓದಿ : ಸೂಕ್ಷ್ಮ ಮಾಹಿತಿ ಕಳವು ಆರೋಪ: ರಷ್ಯಾದ ಕ್ಯಾಸ್ಪರ್ಸ್ಕಿ ಆ್ಯಂಟಿವೈರಸ್ ಸಾಫ್ಟ್ವೇರ್ಗೆ ಅಮೆರಿಕ ನಿರ್ಬಂಧ - US bans Kaspersky