ನವದೆಹಲಿ: ಹೆಚ್ಚುತ್ತಿರುವ ಗ್ರಾಹಕರ ಆಸಕ್ತಿ ಮತ್ತು ಸರ್ಕಾರದ ಉಪಕ್ರಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಭಾರತದಲ್ಲಿ ಇವಿ - ಎಲೆಕ್ಟ್ರಿಕ್ ವಾಹನಗಳ ಮಾರಾಟ 2023ರಲ್ಲಿ ದುಪ್ಪಟ್ಟಾಗಿದ್ದು, ಈ ವರ್ಷ ಅಂದರೆ 2024ರಲ್ಲಿ ಶೇ 66ರಷ್ಟು ಅಭಿವೃದ್ಧಿ ಕಾಣಲಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಭಾರತದ ಪ್ರಯಾಣಿಕರ ವಾಹನ ಮಾರಾಟ ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಬೆಳವಣಿಗೆ ಕಂಡಿದೆ. ಇವಿಗಳು ಸರಿಸುಮಾರು ದುಪ್ಪಟ್ಟು ಪ್ರಮಾಣದಲ್ಲಿ ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಒಟ್ಟಾರೆ ಪ್ರಯಾಣಿಕರ ಮಾರಾಟದಲ್ಲಿ ಶೇ 2ರಷ್ಟು ಬೆಳವಣಿಗೆ ಕಂಡಿದೆ. 2030ರ ಹೊತ್ತಿಗೆ ಭಾರತದ ಪ್ರಯಾಣಿಕರ ವಾಹನ ಮಾರುಕಟ್ಟೆಯಲ್ಲಿ ಇವಿಗಳು ಮೂರನೇ ಒಂದು ಭಾಗವನ್ನು ಪ್ರತಿನಿಧಿಸಬಹುದು ಎಂದು ಅಂದಾಜಿಸಲಾಗಿದೆ. ಇದು ದೇಶದ ಆಟೋಮೋಟಿವ್ ವಲಯದಲ್ಲಿ ದೃಢವಾದ ದೀರ್ಘಾವಧಿಯ ಬೆಳವಣಿಗೆಯ ಹಾದಿಯನ್ನು ಸೂಚಿಸುತ್ತದೆ ಎಂದು ಕೌಂಟರ್ಪಾಯಿಂಟ್ ಸಂಶೋಧನೆ ತಿಳಿಸಿದೆ.
ಮೂಲ ಸೌಕರ್ಯ ಮತ್ತು ಗ್ರಾಹಕರ ಒಲವು ಇವಿ ಕಡೆಗೆ ಹೆಚ್ಚಾದಂತೆ ಟೆಸ್ಲಾದಂತಹ ಹೊಸ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಹಾಗೇ ಚೀನಾದ ಅತ್ಯಂತ ವೇಗವಾದ ಬೆಳವಣಿಗೆ ಕಾಣುತ್ತಿರುವ ಕ್ಸಿಯೊಮಿ ಬ್ರಾಂಡ್ಗಳನ್ನು ಕಾಣಬಹುದಾಗಿದೆ. ಇದು ವಿಶ್ವದ ನಾಲ್ಕನೇ ಅತಿದೊಡ್ಡ ಪ್ರಯಾಣಿಕರ ವಾಹನ ಮಾರುಕಟ್ಟೆಯಲ್ಲಿ ನಾವೀನ್ಯತೆ ಮತ್ತು ಸ್ಪರ್ಧೆಯನ್ನು ವೇಗಗೊಳಿಸುತ್ತದೆ ಎಂದು ಸಂಶೋಧನೆಯ ಉಪಾಧ್ಯಕ್ಷರಾದ ನೀಲ್ ಶಾ ತಿಳಿಸಿದ್ದಾರೆ.
ಇವಿ ವಾಹನಗಳನ್ನು ದೇಶೀಯ ಬಳಕೆಯನ್ನು ಗುರಿಯಾಗಿಸಿಕೊಂಡಿದೆ ಮಾತ್ರವಲ್ಲದೇ, ಆರ್ ಅಂಡ್ ಡಿ ತಂತ್ರಜ್ಞಾನ ಮತ್ತು ರಫ್ತುಗಳಿಗೆ ಭಾರತದ ಮಾರುಕಟ್ಟೆಗೆ ಆದ್ಯತೆ ನೀಡುವ ವಿಶಾಲ ಮೌಲ್ಯದ ಸರಪಳಿ ಎದುರು ನೋಡುತ್ತಿದ್ದೇವೆ ಎಂದರು.
ಉಬರ್‌ನೊಂದಿಗೆ ಬಲವಾದ ಪೋರ್ಟ್ ಫೋಲಿಯೊ ಮತ್ತು ಕಾರ್ಯತಂತ್ರದ ಸಂಬಂಧದೊಂದಿಗೆ, ಟಾಟಾ ಮೋಟಾರ್ಸ್ ಕಳೆದ ವರ್ಷ ದೇಶದ ಇವಿ ಮಾರುಕಟ್ಟೆಯ ಮೂರನೇ ಎರಡರಷ್ಟು ಹೆಚ್ಚು ಭಾಗವನ್ನು ಹೊಂದಿತ್ತು. ಒಂದು ಮಾದರಿಯ ಪೋರ್ಟ್ ಫೋಲಿಯೊದೊಂದಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2,476ರಷ್ಟು ಹೆಚ್ಚಳ ಕಂಡು 2023ರಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಬ್ರಾಂಡ್ ಆಗಿದೆ. ಇದರ ನಂತರದ ಸ್ಥಾನದಲ್ಲಿ ಬಿವೈಡಿ ಮತ್ತು ಎಂಜಿ ಮೋಟಾರ್ಸ್ ಇದೆ.
ಭಾರತದಲ್ಲಿ ಇವಿ ಮಾರಾಟವು 2024 ರಲ್ಲಿ ಶೇಕಡಾ 66 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಇದು ಒಟ್ಟು ಪಿವಿ ಮಾರಾಟದ ಶೇಕಡಾ 4 ರಷ್ಟಿದೆ. ಇವಿ ಬೆಳವಣಿಗೆಯನ್ನು ಗಮನಿಸಿರುವ ಮಾರುತಿ ಸುಜುಕಿ ಕೂಡ ಈ ಕ್ಷೇತ್ರಕ್ಕೆ ಬರಲು ಸಜ್ಜಾಗಿದ್ದು, ಪ್ರವೇಶವು ಟಾಟಾದ ಪ್ರಾಬಲ್ಯವನ್ನು ಅಲುಗಾಡಿಸುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ವಿನ್ಫಾಸ್ಟ್ ಫ್ಯಾಕ್ಟರಿ ನಿರ್ಮಾಣಕ್ಕೆ ಮುಂದಾಗಿದ್ದು, ದೇಶದಲ್ಲಿ ಇವಿ ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಹೂಡಿಕೆಯನ್ನು ತೋರಿಸುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಇ-ವಾಹನ ಕೊಳ್ಳುವುದಷ್ಟೇ ಅಲ್ಲ, ಚಾರ್ಜಿಂಗ್ ಸುರಕ್ಷತೆ, ಬ್ಯಾಟರಿ ನಿರ್ವಹಣೆ ತಿಳಿಯಿರಿ