ನವದೆಹಲಿ : ಇದೇ ಏಪ್ರಿಲ್ 26ಕ್ಕೆ ಸುಂದರ್ ಪಿಚೈ ಗೂಗಲ್ ಕಂಪನಿಗೆ ಸೇರಿ 20 ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ತಾವು ಗೂಗಲ್ನಲ್ಲಿ ಕಳೆದ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ತಂತ್ರಜ್ಞಾನ, ಗೂಗಲ್ನ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ತನ್ನ ಕೂದಲಿನ ಬಣ್ಣ ಸಹ ಈ ವರ್ಷಗಳಲ್ಲಿ ಬದಲಾಗಿದೆ ಎಂದು ಅವರು ನುಡಿದಿದ್ದಾರೆ. ಸದ್ಯ ಪಿಚೈ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.
2004 ರಲ್ಲಿ ಟೆಕ್ ದೈತ್ಯ ಗೂಗಲ್ ಕಂಪನಿಯಲ್ಲಿ ಉತ್ಪನ್ನ ವ್ಯವಸ್ಥಾಪಕರಾಗಿ (product manager) ಸೇರಿದ ಪಿಚೈ, ಕಂಪನಿಯಲ್ಲಿ ಎರಡು ದಶಕಗಳನ್ನು ಪೂರ್ಣಗೊಳಿಸಿದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೃದಯಸ್ಪರ್ಶಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.
"ಏಪ್ರಿಲ್ 26, 2004 ಗೂಗಲ್ನಲ್ಲಿ ನನ್ನ ಮೊದಲ ದಿನವಾಗಿತ್ತು. ಅಂದಿನಿಂದ ಬಹಳಷ್ಟು ಬದಲಾಗಿದೆ. ತಂತ್ರಜ್ಞಾನ, ನಮ್ಮ ಉತ್ಪನ್ನಗಳನ್ನು ಬಳಸುವ ಜನರ ಸಂಖ್ಯೆ ... ನನ್ನ ಕೂದಲು ಹೀಗೆ ಸಾಕಷ್ಟು ಬದಲಾವಣೆಯಾಗಿವೆ" ಎಂದು ಅವರು ಬರೆದಿದ್ದಾರೆ.
ಆದಾಗ್ಯೂ, ಈ ಅದ್ಭುತ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ನಾನು ಪಡೆಯುವ ರೋಮಾಂಚನ ಮಾತ್ರ ಬದಲಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. "20 ವರ್ಷಗಳ ನಂತರವೂ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾನು ಇನ್ನೂ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ" ಎಂದು ಪಿಚೈ ಹೇಳಿದ್ದಾರೆ.
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಪಿಚೈ ಅವರ ಸಾಧನೆಯನ್ನು ಹೊಗಳಿ ನೂರಾರು ಬಳಕೆದಾರರು ಕಮೆಂಟ್ ಮಾಡಿದ್ದಾರೆ. "ಎರಡು ದಶಕಗಳ ಅಚಲ ಬದ್ಧತೆ, ಇಪ್ಪತ್ತು ವರ್ಷಗಳ ಸಾಧನೆ ಮತ್ತು ಶ್ರೇಷ್ಠತೆಯ ಪರಂಪರೆ" ಎಂದು ಒಬ್ಬ ಅಭಿಮಾನಿ ಬರೆದಿದ್ದಾರೆ.
ಗೂಗಲ್ನಲ್ಲಿ ಪಿಚೈ ಕ್ರೋಮ್ ಮತ್ತು ಕ್ರೋಮ್ ಓಎಸ್ನಂತಹ ಹಲವಾರು ಉತ್ಪನ್ನಗಳ ಉತ್ಪನ್ನ ನಿರ್ವಹಣೆ ಮತ್ತು ಸಂಶೋಧನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಗೂಗಲ್ ಡ್ರೈವ್ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆಗಸ್ಟ್ 2015 ರಲ್ಲಿ ಪಿಚೈ ಗೂಗಲ್ ಸಿಇಒ ಆಗಿ ನೇಮಕಗೊಂಡಿದ್ದರು. 2019 ರಲ್ಲಿ ಅವರು ಗೂಗಲ್ನ ಮಾತೃ ಕಂಪನಿಯಾದ ಆಲ್ಫಾಬೆಟ್ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಭಾರತದಲ್ಲಿ ಜನಿಸಿದ ಸುಂದರ ಪಿಚೈ ಖರಗ್ಪುರ ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : BMW ಎಲೆಕ್ಟ್ರಿಕ್ ಕಾರು ಬಿಡುಗಡೆ: ಬೆಲೆ 1 ಕೋಟಿಗಿಂತ ಸ್ವಲ್ಪ ಜಾಸ್ತಿ! - BMW Electric Car