ನವದೆಹಲಿ: ಜಂಟಿ ಯೋಜನೆಗಳು ಮತ್ತು ತಾಂತ್ರಿಕ ಸಹಯೋಗದ ಮೂಲಕ ಆಹಾರ ಸುರಕ್ಷತೆಯನ್ನು ಸುಧಾರಿಸಲು ಬ್ರೆಜಿಲ್‌ನ ಕೃಷಿ ಮತ್ತು ಪಶುಸಂಗೋಪನಾ ಸಚಿವಾಲಯ (ಎಂಎಪಿಎ)ದೊಂದಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
'ಗ್ಲೋಬಲ್ ಫುಡ್ ರೆಗ್ಯುಲೇಟರ್ಸ್ ಶೃಂಗಸಭೆ-2024'ಯಲ್ಲಿ ಈ ಕುರಿತ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
"ಆಹಾರ ಸುರಕ್ಷತೆಗೆ ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ಇದಕ್ಕಾಗಿ ಅಂತಾರಾಷ್ಟ್ರೀಯ ಸಹಯೋಗಗಳನ್ನು ಹೆಚ್ಚಿಸಲು ನಾವು ಕೈಗೊಂಡ ಪ್ರಯತ್ನಗಳಲ್ಲಿ ಪ್ರಮುಖ ಪ್ರಗತಿಯನ್ನು ಇಂದಿನ ಬೆಳವಣಿಗೆ ಸೂಚಿಸುತ್ತದೆ" ಎಂದು ಎಫ್‌ಎಸ್‌ಎಸ್‌ಎಐ ಸಿಇಒ ಜಿ.ಕಮಲಾ ವರ್ಧನ ರಾವ್ ತಿಳಿಸಿದರು.
"ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸಲು ಮತ್ತು ಎರಡೂ ದೇಶಗಳಲ್ಲಿ ಆಹಾರದ ಸುರಕ್ಷತೆಯನ್ನು ಹೆಚ್ಚಿಸಲು MAPAಯೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಈ ನಿಟ್ಟಿನಲ್ಲಿ ನಿಕಟವಾಗಿ ಕೆಲಸ ಮಾಡುವ ಮೂಲಕ ಉಭಯ ರಾಷ್ಟ್ರಗಳ ಹಿತಾಸಕ್ತಿಗಳನ್ನು ಪೂರೈಸುವ ದೃಢ ಮತ್ತು ಪರಿಣಾಮಕಾರಿ ಆಹಾರ ಸುರಕ್ಷತೆಯ ಚೌಕಟ್ಟನ್ನು ನಿರ್ಮಿಸುತ್ತಿದ್ದೇವೆ" ಎಂದು ರಾವ್ ಹೇಳಿದರು.
"ಇದು ಆಹಾರ ಸುರಕ್ಷತೆಯ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೊಸ ಮೈಲಿಗಲ್ಲು. ಸಾಂಸ್ಥಿಕ ಸಹಯೋಗವನ್ನು ಬಲಪಡಿಸುವ ಮತ್ತು ಜಂಟಿ ಉಪಕ್ರಮಗಳನ್ನು ಅನುಸರಿಸುವ ಗುರಿಯೊಂದಿಗೆ ತಾಂತ್ರಿಕ ಸಹಕಾರ, ಅನುಭವ ಮತ್ತು ಜ್ಞಾನದ ವಿನಿಮಯಕ್ಕೆ ಅವಕಾಶ ನೀಡುತ್ತದೆ" ಎಂದು ಬ್ರೆಜಿಲ್‌ನ ಕೃಷಿ ಮತ್ತು ಪಶುಸಂಗೋಪನಾ ಸಚಿವಾಲಯದ ಪ್ರತಿನಿಧಿ ಅಭಿಪ್ರಾಯಪಟ್ಟರು.
"ಈ ದ್ವಿಪಕ್ಷೀಯ ಸಭೆ ಭಾರತಕ್ಕೆ ರಫ್ತು ಮಾಡುವಾಗ ಅನುಷ್ಠಾನದ ಸವಾಲುಗಳನ್ನು ಚರ್ಚಿಸಲು ಮತ್ತು ತಳಮಟ್ಟದಲ್ಲಿ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಂತ್ರಿಕ ಸಹಕಾರ ಮತ್ತು ಸಾಮರ್ಥ್ಯ ವರ್ಧನೆಯ ಕ್ಷೇತ್ರಗಳ ಕುರಿತು ಚರ್ಚಿಸಲು ಅವಕಾಶ ಒದಗಿಸಿದೆ" ಎಂದು ಬಿಎಫ್‌ಡಿಎ ನಿರ್ದೇಶಕ ಗೈಮ್ ಬಿಧಾ ಹೇಳಿದ್ದಾರೆ.
FSSAI, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ನಡೆದ ಈ ಶೃಂಗಸಭೆಯಲ್ಲಿ ಭೂತಾನ್ ಆಹಾರ ಮತ್ತು ಔಷಧ ಪ್ರಾಧಿಕಾರದೊಂದಿಗೆ (BFDA) ದ್ವಿಪಕ್ಷೀಯ ಮಾತುಕತೆಗಳು ನಡೆದವು. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಬಿಎಫ್‌ಡಿಎ ನಡುವೆ ಸಹಿ ಹಾಕಲಾದ ಒಪ್ಪಂದದ ಅನುಷ್ಠಾನದ ಪ್ರೋಟೋಕಾಲ್ ಕುರಿತು ಸಭೆ ವಿಶೇಷವಾಗಿ ಗಮನಹರಿಸಿತು.