Electric Vehicle Sales: ಐಷಾರಾಮಿ ಬ್ರ್ಯಾಂಡ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟ ಆಗಸ್ಟ್ 2024ರಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. BYD, EV ವಿಭಾಗದಲ್ಲಿ ಐಷಾರಾಮಿ EVಗಳನ್ನು ಮಾರಾಟ ಮಾಡುವ ಕಂಪನಿಯು ಉತ್ತಮ ಬೆಳವಣಿಗೆ ಕಂಡಿದೆ. ಎಲೆಕ್ಟ್ರಿಕ್ ವೆಹಿಕಲ್ (EV) ಬ್ರ್ಯಾಂಡ್ ಚಿಲ್ಲರೆ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ 100ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದೆ. ಇದರ ಜೊತೆಗೆ ಮರ್ಸಿಡಿಸ್ ಬೆಂಜ್, ಜಾಗ್ವಾರ್ ಲ್ಯಾಂಡ್ ರೋವರ್, ಫೋರ್ಸ್‌ನಂತಹ ಐಷಾರಾಮಿ ಕಾರು ಕಂಪನಿಗಳೂ ಸಹ ಮಾರಾಟದಲ್ಲಿ ಬೆಳವಣಿಗೆ ಕಂಡಿವೆ. ಆದರೆ BMW, Citroen, Volvo, Jeepನಂತಹ ಕಾರು ಕಂಪನಿಗಳ ಮಾರಾಟದಲ್ಲಿ ಕುಸಿತ ದಾಖಲಿಸಿವೆ.
ರಶ್ಲೇನ್ ಮಾರಾಟ ವರದಿಯ ಪ್ರಕಾರ, ಐಷಾರಾಮಿ ಕಾರು ಬ್ರ್ಯಾಂಡ್‌ಗಳಲ್ಲಿ ಮರ್ಸಿಡಿಸ್-ಬೆನ್ಜ್ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ 11.07ರಷ್ಟು ಬೆಳವಣಿಗೆ ಕಂಡಿದೆ. ಆಗಸ್ಟ್ 2024ರಲ್ಲಿ 1,234 ಯುನಿಟ್‌ಗಳ ಮಾರಾಟ ಗಳಿಸಿದೆ. ಆಗಸ್ಟ್ 2023ರಿಂದ 123 ಯುನಿಟ್‌ಗಳಷ್ಟು ಹೆಚ್ಚಳವಾಗಿದೆ. ಆದರೆ BMW ಶೇ 16.95ರಷ್ಟು ಕುಸಿತವಾಗಿದೆ. ಆಗಸ್ಟ್‌ನಲ್ಲಿ ಮಾರಾಟ ಪ್ರಮಾಣವು 921 ಯುನಿಟ್‌ಗಳಿಗೆ ಕುಸಿದಿದೆ.
ಜಾಗ್ವಾರ್ ಲ್ಯಾಂಡ್ ರೋವರ್ (JLR) ಚಿಲ್ಲರೆ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ 62.17ರಷ್ಟು ಪ್ರಭಾವಶಾಲಿ ಬೆಳವಣಿಗೆಯ ವರದಿ ಮಾಡಿದೆ. JLR ಆಗಸ್ಟ್ 2024ರಲ್ಲಿ 433 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಆಗಸ್ಟ್ 2023ರಲ್ಲಿ ಮಾರಾಟವಾದ 267 ಯುನಿಟ್‌ಗಳಿಗಿಂತ 166 ಯುನಿಟ್‌ಗಳಷ್ಟು ಹೆಚ್ಚು.
ಕಳೆದ ತಿಂಗಳು ವೋಲ್ವೋ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಇದು ಶೇ 35.00ರಷ್ಟು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತ ಕಂಡಿತು. ಆಗಸ್ಟ್ 2024ರಲ್ಲಿ ಬ್ರ್ಯಾಂಡ್ 104 ಯುನಿಟ್‌ಗಳ ಮಾರಾಟ ಸಾಧಿಸಿದೆ. ಇದು ಆಗಸ್ಟ್ 2023ರಲ್ಲಿ ಮಾರಾಟವಾದ 160 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ.
BYD, ಎಲೆಕ್ಟ್ರಿಕ್ ವೆಹಿಕಲ್ (EV) ಬ್ರ್ಯಾಂಡ್ ಅತ್ಯಧಿಕ ಬೆಳವಣಿಗೆ ದರ ದಾಖಲಿಸಿದೆ. ಚಿಲ್ಲರೆ ಮಾರಾಟ ವರ್ಷದಿಂದ ವರ್ಷಕ್ಕೆ ಶೇ 100.96ರಷ್ಟು ಹೆಚ್ಚುತ್ತಿದೆ. BYD ಆಗಸ್ಟ್ 2024ರಲ್ಲಿ 209 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದು ಆಗಸ್ಟ್ 2023ಕ್ಕೆ ಹೋಲಿಸಿದರೆ 105 ಯುನಿಟ್‌ಗಳ ಹೆಚ್ಚಳವನ್ನು ಸೂಚಿಸುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತದೆ.
ಸಿಟ್ರೊಯೆನ್ ಮಾರಾಟ ಪ್ರಮಾಣ ಶೇ 22.54ರಷ್ಟು ಕುಸಿತ ಎದುರಿಸಿದೆ. ಆಗಸ್ಟ್ 2024ರಲ್ಲಿ ಸಿಟ್ರೊಯೆನ್ 402 ಯುನಿಟ್‌ಗಳ ಮಾರಾಟ ಸಾಧಿಸಿದೆ. ಆಗಸ್ಟ್ 2023ರಲ್ಲಿ ಮಾರಾಟವಾದ 519 ಯುನಿಟ್‌ಗಳಿಗಿಂತ 117 ಯುನಿಟ್‌ಗಳು ಕಡಿಮೆಯಾಗಿದೆ. ಕೆಲವು ದಿನಗಳ ಹಿಂದೆ, ಸಿಟ್ರೊಯೆನ್ ಟಾಟಾ ಕರ್ವ್‌ಗೆ ಸ್ಪರ್ಧಿಸುವ ಬಸಾಲ್ಟ್ ಎಂಬ ಕೂಲ್ ಕೂಪೆ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಫೋರ್ಸ್ ಮೋಟಾರ್ಸ್ ಸಹ ಪಾಸಿಟಿವ್ ರಿಸಲ್ಟ್ ಪ್ರಕಟಿಸಿದೆ. ಕಂಪನಿಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 7.00ರಷ್ಟು ಹೆಚ್ಚುತ್ತಿದೆ. ಫೋರ್ಸ್ ಮೋಟಾರ್ಸ್ ಆಗಸ್ಟ್ 2024ರಲ್ಲಿ 749 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಆಗಸ್ಟ್ 2023ರಲ್ಲಿ ಮಾರಾಟವಾದ 700 ಯುನಿಟ್‌ಗಳಿಗಿಂತ 49 ಯುನಿಟ್‌ಗಳು ಹೆಚ್ಚು.
ಜೀಪ್ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಜೀಪ್ ತಯಾರಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 37.48ರಷ್ಟು ಕುಸಿತ ಕಂಡುಬಂದಿದೆ. ಆಗಸ್ಟ್ 2024ರಲ್ಲಿ ಕೇವಲ 327 ಯುನಿಟ್ ಜೀಪ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಇದು 196 ಯುನಿಟ್ ಕಡಿಮೆ.
ಎಲೆಕ್ಟ್ರಿಕ್ ವಾಹನಗಳ ಮಾರಾಟ ಗಣನೀಯ ಏರಿಕೆ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಗಣನೀಯವಾಗಿ ಹೆಚ್ಚುತ್ತಿದೆ. 2030ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಒಂದು ಕೋಟಿ ತಲುಪುವ ನಿರೀಕ್ಷೆಯಿದೆ. ದೇಶದಲ್ಲಿ ಸುಮಾರು 30 ಲಕ್ಷ ಇವಿ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಭಾರತದ ಅಟೋಮೊಬೈಲ್ ಉದ್ಯಮವು ದೇಶದ ಆರ್ಥಿಕತೆಗೆ ಶೇ 6.8ರಷ್ಟು ಕೊಡುಗೆ ನೀಡುತ್ತದೆ. ಅಲ್ಲದೆ, ಈ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ.
ಇದನ್ನೂ ಓದಿ: ಎಂಜಿ ವಿಂಡ್ಸರ್ ಇವಿ ಬೆಲೆ ರಿವೀಲ್, ಈ ಕಾರು 3 ರೂಪಾಂತರಗಳಲ್ಲಿ ಲಭ್ಯ - MG Motor India New Car