ನವದೆಹಲಿ: 2023 ರ ಡಿಸೆಂಬರ್ ತ್ರೈಮಾಸಿಕದಲ್ಲಿ ಆ್ಯಪಲ್ ತನ್ನ ಐಫೋನ್ಗಳ ಮಾರಾಟದಿಂದ 69.7 ಬಿಲಿಯನ್ ಡಾಲರ್ ಆದಾಯ ದಾಖಲಿಸಿದೆ. ಕಂಪನಿಯು ಲ್ಯಾಟಿನ್ ಅಮೆರಿಕ, ಪಶ್ಚಿಮ ಯುರೋಪ್, ಮಧ್ಯಪ್ರಾಚ್ಯ ಮತ್ತು ಕೊರಿಯಾ ಸೇರಿದಂತೆ ಹಲವಾರು ದೇಶಗಳು ಮತ್ತು ಪ್ರದೇಶಗಳಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿದೆ. ಜೊತೆಗೆ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಡಿಸೆಂಬರ್ ತ್ರೈಮಾಸಿಕ ಮಾರಾಟದಲ್ಲಿ ದಾಖಲೆಗಳನ್ನು ಬರೆದಿದೆ.
"ಐಫೋನ್ ಸಕ್ರಿಯ ಬಳಕೆದಾರರ ಸಂಖ್ಯೆ ಹೊಸ ಸಾರ್ವಕಾಲಿಕ ಎತ್ತರಕ್ಕೆ ಬೆಳೆದಿದೆ ಮತ್ತು ತ್ರೈಮಾಸಿಕದಲ್ಲಿ ನಾವು ಸಾರ್ವಕಾಲಿಕ ದಾಖಲೆ ಸಂಖ್ಯೆಯ ಐಫೋನ್ ಅಪ್ ಗ್ರೇಡ್ಗಳನ್ನು ನೀಡಿದ್ದೇವೆ" ಎಂದು ಆಪಲ್ ಸಿಎಫ್ಒ ಲುಕಾ ಮೇಸ್ಟ್ರಿ ಹೇಳಿದರು. ಕಾಂಟಾರ್ ನ ಸಮೀಕ್ಷೆಯ ಪ್ರಕಾರ, ಯುಎಸ್ ಮತ್ತು ಜಪಾನ್ನ ಅಗ್ರ ಐದು ಮಾಡೆಲ್ಗಳಲ್ಲಿ ನಾಲ್ಕು, ಚೀನಾ ಮತ್ತು ಯುಕೆಯ ಅಗ್ರ ಆರು ಮಾಡೆಲ್ಗಳಲ್ಲಿ ನಾಲ್ಕು ಮತ್ತು ಆಸ್ಟ್ರೇಲಿಯಾದ ಎಲ್ಲಾ ಅಗ್ರ ಐದು ಮಾಡೆಲ್ಗಳು ಐಫೋನ್ಗಳೇ ಆಗಿವೆ.
ಆ್ಯಪಲ್ ಸರ್ವಿಸಸ್ ಆದಾಯವು ಸಾರ್ವಕಾಲಿಕ ದಾಖಲೆಯ 23.1 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಹೆಚ್ಚಾಗಿದೆ. ಈ ವರ್ಷ ಒಂದು ವಾರ ಮಾರಾಟ ನಿಲ್ಲಿಸಿದ ಹೊರತಾಗಿಯೂ ಮ್ಯಾಕ್ $ 7.8 ಬಿಲಿಯನ್ ಆದಾಯ ಗಳಿಸಿದೆ.
"ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ನಮ್ಮ ಸೇವೆಗಳ ಕಾರ್ಯಕ್ಷಮತೆಯ ಬಗ್ಗೆ ಸಂತೋಷವಾಗಿದೆ. ಅಮೆರಿಕ, ಯುರೋಪ್ ಮತ್ತು ಏಷ್ಯಾ-ಪೆಸಿಫಿಕ್ನ ಉಳಿದ ಭಾಗಗಳಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ನಿರ್ಮಿಸಿದ್ದೇವೆ" ಎಂದು ಮೇಸ್ಟ್ರಿ ಹೇಳಿದರು.
ಐಪ್ಯಾಡ್ ಆದಾಯವು 7 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 25 ರಷ್ಟು ಕಡಿಮೆಯಾಗಿದೆ. ವೇರೆಬಲ್ಸ್, ಹೋಮ್ ಮತ್ತು ಅಕ್ಸೆಸೊರಿಗಳ ಆದಾಯವು 12 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಕಡಿಮೆಯಾಗಿದೆ. ಮುಂಬರುವ ಆ್ಯಪಲ್ ವಿಷನ್ ಪ್ರೊ ಬಿಡುಗಡೆಯೊಂದಿಗೆ ಕಂಪನಿಯು ಮತ್ತಷ್ಟು ಹೆಚ್ಚಿನ ಮಾರಾಟದ ಉತ್ಸಾಹದಲ್ಲಿದೆ.
ವಾಲ್ಮಾರ್ಟ್, ನೈಕ್, ವ್ಯಾನ್ಗಾರ್ಡ್, ಸ್ಟ್ರೈಕರ್, ಬ್ಲೂಮ್ಬರ್ಗ್ ಮತ್ತು ಎಸ್ಎಪಿಯಂತಹ ಅನೇಕ ಪ್ರಮುಖ ಸಂಸ್ಥೆಗಳು ತಮ್ಮ ಗ್ರಾಹಕರು ಮತ್ತು ಉದ್ಯೋಗಿಗಳಿಗೆ ನವೀನ ಪ್ರಾದೇಶಿಕ ಕಂಪ್ಯೂಟಿಂಗ್ ಅನುಭವಗಳನ್ನು ತರಲು ಹೊಸ ವೇದಿಕೆಯಾಗಿ ಆ್ಯಪಲ್ ವಿಷನ್ ಪ್ರೊನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿವೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ಗೂಗಲ್ನ ಎಐ ಚಾಟ್ಬಾಟ್ ಜೆಮಿನಿ ಪ್ರೊ ಈಗ ಕನ್ನಡ ಸೇರಿ 9 ಭಾರತೀಯ ಭಾಷೆಗಳಲ್ಲಿ ಲಭ್ಯ