ನವದೆಹಲಿ : ಐಫೋನ್ ತಯಾರಕ ಕಂಪನಿ ಆ್ಯಪಲ್ ಶೀಘ್ರದಲ್ಲೇ ತನ್ನ ಫೊಲ್ಡೆಬಲ್ ಫೋನ್ (ಮಡಚಬಹುದಾದ ಫೋನ್) ಗಳನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ. 9 ಟು 5ಮ್ಯಾಕ್ ವರದಿಯ ಪ್ರಕಾರ, ಕಂಪನಿಯು ಫೊಲ್ಡೆಬಲ್ ಫೋನ್ ತಯಾರಿಸುವ ಕೆಲಸಗಳನ್ನು ವೇಗಗೊಳಿಸಿದೆ ಮತ್ತು 2026 ರ ಅಂತ್ಯದ ವೇಳೆಗೆ ಬಹುನಿರೀಕ್ಷಿತ ಫೊಲ್ಡೆಬಲ್ ಐಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಬಹುದು.
ಹೊಸ ಫೊಲ್ಡೆಬಲ್ ಐಫೋನ್ಗಳನ್ನು ಅಲ್ಟ್ರಾ ಹೈ ಎಂಡ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆ. 7.9 ಇಂಚು ಮತ್ತು 8.3 ಇಂಚು ಹೀಗೆ ಎರಡು ಸ್ಕ್ರೀನ್ ಸೈಜ್ಗಳಲ್ಲಿ ಈ ಫೋನ್ಗಳು ಬರಲಿವೆ ಎಂದು ವರದಿ ಹೇಳಿದೆ.
ಏತನ್ಮಧ್ಯೆ ಆ್ಯಪಲ್ ತನ್ನ 'ಲೆಟ್ ಲೂಸ್' ಕಾರ್ಯಕ್ರಮವನ್ನು ಮೇ 7 ರಂದು ನಡೆಸಲು ನಿರ್ಧರಿಸಿದ್ದು, ಅಲ್ಲಿ ಅದು ತನ್ನ ಐಪ್ಯಾಡ್ ಶ್ರೇಣಿಗೆ ಕೆಲವು ಬಹುನಿರೀಕ್ಷಿತ ಅಪ್ಡೇಟ್ಗಳನ್ನು ಘೋಷಿಸುವ ನಿರೀಕ್ಷೆಯಿದೆ. ಹಾಗೆಯೇ ಕಂಪನಿಯ ಸಿಇಒ ಟಿಮ್ ಕುಕ್ ಅವರು ಐಪ್ಯಾಡ್ ಪ್ರೊನಲ್ಲಿ ತನ್ನ ಮೊದಲ ಎಂ 4 ಚಿಪ್ ಸೆಟ್ ಅನ್ನು ಪರಿಚಯಿಸುವುದಾಗಿ ಘೋಷಿಸುವ ನಿರೀಕ್ಷೆಯಿದೆ. ಇದು ಒಎಲ್ಇಡಿ ಡಿಸ್ ಪ್ಲೇ ಅಪ್ಡೇಟ್ನೊಂದಿಗೆ ಬರಬಹುದು.
ಐಪ್ಯಾಡ್ ಏರ್ ಮಾರುಕಟ್ಟೆಗೆ ಬರುವ ನಿರೀಕ್ಷೆ: ಏತನ್ಮಧ್ಯೆ, ಐಪ್ಯಾಡ್ ಏರ್ ಆವೃತ್ತಿಯು 12.9 ಇಂಚುಗಳ ದೊಡ್ಡ ಪರದೆ ಗಾತ್ರದೊಂದಿಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇದು ಈ ಹಿಂದೆ ಪ್ರೊ ಸರಣಿಗೆ ಸೇರಿತ್ತು. ಇತ್ತೀಚೆಗೆ ಆ್ಯಪಲ್ ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಲವಾದ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಕಂಪನಿಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತದೆ ಎಂದು ಘೋಷಿಸಿದೆ.
ಭಾರತವು ಜಾಗತಿಕ ಟೆಕ್ ಕಂಪನಿಗಳಿಗೆ ಪ್ರಮುಖ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ ಮತ್ತು ಇಲ್ಲಿನ ಬೆಳೆಯುತ್ತಿರುವ ಡೆವಲಪರ್ಗಳ ಸಂಖ್ಯೆಯು ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಹೇಳಿದರು.
ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಆ್ಯಪಲ್ನ ಪ್ರಯತ್ನಗಳಲ್ಲಿ ವಿತರಣಾ ಚಾನೆಲ್ ಗಳನ್ನು ಬಲಪಡಿಸುವುದು ಮತ್ತು ಡೆವಲಪರ್ ಸಮುದಾಯವನ್ನು ಬೆಂಬಲಿಸುವುದು ಸೇರಿವೆ. ಆ್ಯಪಲ್ 2023 ರಲ್ಲಿ ಭಾರತದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಡೆವಲಪರ್ ಉದ್ಯೋಗಗಳನ್ನು ಬೆಂಬಲಿಸಿರುವುದು ಗಮನಾರ್ಹ.
2023 ರಲ್ಲಿ ಭಾರತದಲ್ಲಿ ಆ್ಯಪಲ್, ಮೈಕ್ರೋಸಾಫ್ಟ್ ಮತ್ತು ಮೆಟಾ ಈ ಮೂರೂ ಕಂಪನಿಗಳ ಆದಾಯ ಬೆಳವಣಿಗೆಯ ಪ್ರಮಾಣವು ಅವುಗಳ ಜಾಗತಿಕ ಆದಾಯ ಬೆಳವಣಿಗೆಯ ಪ್ರಮಾಣಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ : ಸ್ಮಾರ್ಟ್ಫೋನ್ ಓವರ್ ಹೀಟ್ ಆಗ್ತಿದೆಯಾ? ತಣ್ಣಗಾಗಿಸಲು ಹೀಗೆ ಮಾಡಿ - Smartphone Overheating